ರಾಜಕೀಯ

ಬಿಜೆಪಿ ಕೈಗೊಂಡಿರುವುದು ಧರ್ಮಯಾತ್ರೆ ಅಲ್ಲ, ರಾಜಕೀಯ ಯಾತ್ರೆ: ಸಿಎಂ ಸಿದ್ದರಾಮಯ್ಯ

Views: 1

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ‘ಧರ್ಮ ಯಾತ್ರೆಯಲ್ಲ, ರಾಜಕೀಯ ಯಾತ್ರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಮಂಗಳವಾರ ಸೆ.2ರಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿಯವರು ಈಗ ಎನ್‌ಐಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಹಾಗಾದರೆ, ನಮ್ಮ ಪೊಲೀಸರ ಮೇಲೆ ಅವರಿಗೆ ನಂಬಿಕೆ ಇಲ್ಲವೇ ಎಂದು ಸಿಎಂ ಪ್ರಶ್ನಿಸಿದರು.

ಎಸ್ಐಟಿ ರಚನೆಯಾದ ಪ್ರಾರಂಭದಲ್ಲಿ ಎನ್ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ ದೇಹಗಳು ಸಿಗದೇ ಹೋದಾಗ ಒತ್ತಾಯಿಸುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವತಃ ಸತ್ಯ ಹೊರಬರಲಿ ಎಂದು ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ನಮ್ಮ ಮೇಲಿನ ಅನುಮಾನದ ತೂಗುಗತ್ತಿ ನಿವಾರಣೆಯಾಗಬೇಕೆಂದಿದ್ದಾರೆ. ಎಸ್‌ಐಟಿ ತನಿಖೆ ಸ್ವತಂತ್ರವಾಗಿ ನಡೆಯುತ್ತಿದ್ದು, ನಾವ್ಯಾರು ಅದರಲ್ಲಿ ಹಸ್ತಕ್ಷೇಪ ಮಾಡಿಲ್ಲ. ಸತ್ಯ ಹೊರಬರಬೇಕು ಎಂದರು.

ಧರ್ಮಸ್ಥಳದ ವಿರುದ್ದ ‍ಷಡ್ಯಂತ್ರ ರೂಪಿಸಲು ಹೊರದೇಶಗಳಿಂದ ಹಣ ಬಂದಿದೆ ಎಂಬ ಬಿಜೆಪಿ ಆರೋಪದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, “ಇದರಲ್ಲಿ ಸತ್ಯವಿಲ್ಲ, ಹಣ ಬಂದಿರುವುದು ಬಿಜೆಪಿಯವರಿಗೆ. ವಿರೋಧಿಗಳು ಟೀಕೆ ಮಾಡಲಿ. ಆದರೆ ಎಲ್ಲಾ ವಿಷಯಗಳಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.

ಬಿಜೆಪಿಯವರು ಯಾರ ಪರ?

ಸೌಜನ್ಯ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿರುವ ಬಗ್ಗೆ ಮಾತನಾಡಿದ ಸಿಎಂ, “ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಅವರು ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕೆಂದು ಬಿಜೆಪಿ ಹೇಳುತ್ತಿದೆ. ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೆ ಆರೋಪವಿದೆ. ಹಾಗಾದರೆ, ಬಿಜೆಪಿ ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು. ಒಂದು ಕಡೆ ವೀರೇಂದ್ರ ಹೆಗಡೆಯವರ ಪರ ಎನ್ನುತ್ತಾರೆ, ಮತ್ತೊಂದೆಡೆ ಸೌಜನ್ಯ ಪರ ಎನ್ನುತ್ತಾರೆ. ನಿಜವಾಗಿಯೂ ಇವರು ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು.

ಸತ್ಯ ಗೊತ್ತಿದ್ದ ಮೇಲೆ, ಅದನ್ನು ಮುಚ್ಚಿಡುವುದು ಅಪರಾಧ

12 ವರ್ಷಗಳ ಹಿಂದೆ ಸೌಜನ್ಯಾಳನ್ನು ಅಪಹರಿಸಿರುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ಎಸ್ಐಟಿಗೆ ಮಹಿಳೆಯೊಬ್ಬರು ದೂರ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಇದನ್ನು ಸಿಬಿಐ ತನಿಖೆ ನಡೆದಾಗ ಏಕೆ ಹೇಳಲಿಲ್ಲ? ಸತ್ಯ ಗೊತ್ತಿದ್ದ ಮೇಲೆ, ಅದನ್ನು ಮುಚ್ಚಿಡುವುದು ಅಪರಾಧ ಎಂದು ಹೇಳಿದರು.

ಸೌಜನ್ಯ ಪ್ರಕರಣದ ಮರು ತನಿಖೆ: ಸೌಜನ್ಯ ತಾಯಿ ತೀರ್ಮಾನಿಸಬೇಕು

ಸೌಜನ್ಯ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ನಾನು ಅದರ ತೀರ್ಪನ್ನು ನೋಡಿಲ್ಲ. ಈ ಬಗ್ಗೆ ಸೌಜನ್ಯ ತಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

Related Articles

Back to top button