ಸಾಮಾಜಿಕ

ಸಾಫ್ಟ್‌ವೇರ್‌ ಎಂಜಿನಿಯರ್‌ ಮತ್ತು ಆಕೆಯ ತಾಯಿ ಆತ್ಮಹತ್ಯೆ

Views: 150

ಕನ್ನಡ ಕರಾವಳಿ ಸುದ್ದಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಮಗಳು ಹಾಗೂ ತಾಯಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ನಾಗೊಂಡನಹಳ್ಳಿ ನಿವಾಸಿ ಶ್ರೀಜಾ ರೆಡ್ಡಿ (25), ಅವರ ತಾಯಿ ರಚಿತಾ ರೆಡ್ಡಿ (48) ಆತ್ಮಹತ್ಯೆ ಮಾಡಿಕೊಂಡವರು.

ಖಾಸಗಿ ಕಂಪನಿಯಲ್ಲಿ ಎಂಜಿನಿಯರ್‌ ಆಗಿರುವ ಶ್ರೀಧರ್‌ ರೆಡ್ಡಿ, ಪತ್ನಿ ರಚಿತಾ ರೆಡ್ಡಿ, ಪುತ್ರಿ ಶ್ರೀಜಾ ರೆಡ್ಡಿ ಜತೆ ನಾಗೊಂಡನಹಳ್ಳಿಯ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಎಂಜಿನಿಯರಿಂಗ್‌ ವ್ಯಾಸಂಗ ಮಾಡಿರುವ ಶ್ರೀಜಾ, ಖಾಸಗಿ ಕಂಪನಿಯಲ್ಲಿ ಡೇಟಾ ಅನಲಿಸ್ಟ್‌ (ಟೆಕ್ಕಿ) ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಚಿತಾ ಗೃಹಿಣಿಯಾಗಿದ್ದರು.

ಸೋಮವಾರ ಬೆಳಗ್ಗೆ ಶ್ರೀಧರ್‌ ರೆಡ್ಡಿ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ರಚಿತಾ ಹಾಗೂ ಶ್ರೀಜಾ ಮನೆಯಲ್ಲಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪತ್ನಿ ಹಾಗೂ ಮಗಳು ಕರೆ ಸ್ವೀಕರಿಸದಿದ್ದಕ್ಕೆ ಆತಂಕಗೊಂಡ ಶ್ರೀಧರ್‌ ರೆಡ್ಡಿ, ಮನೆಗೆ ಧಾವಿಸಿದ್ದರು. ಮನೆಯ ಬಾಗಿಲು ಒಡೆದು ಒಳಪ್ರವೇಶಿಸಿದಾಗ ಕೊಠಡಿಯಲ್ಲಿ ತಾಯಿ – ಮಗಳಿಬ್ಬರೂ ನೇಣು ಬಿಗಿದುಕೊಂಡು ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಠಡಿಯಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಅದರಲ್ಲಿ ” ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ” ಎಂದು ಬರೆಯಲಾಗಿದೆ. ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶ್ರೀಜಾ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ತಾಯಿ ಕೂಡ ಆಘಾತಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ.

Related Articles

Back to top button