ಸಾಮಾಜಿಕ

ಮೂರನೇ ಹೆಂಡತಿಯನ್ನು ಕೊಲೆ ಮಾಡಿ ಶವ ಬಸ್ಸಿನಲ್ಲಿ ಪಾರ್ಸ್‌ಲ್‌ ಮಾಡಿದ್ದ ಆರೋಪಿ: 23 ವರ್ಷದ ಬಳಿಕ ಬಂಧನ

Views: 250

ಕನ್ನಡ ಕರಾವಳಿ ಸುದ್ದಿ: ಮೂರನೇ ಹೆಂಡತಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಲಗೇಜ್ ಎಂದು ಬಸ್ಸಿನಲ್ಲಿ ಕಳುಹಿಸಿ 23 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಹಾಲದಾಳ ಗ್ರಾಮದ 75 ವರ್ಷದ ವೃದ್ಧ ಹನುಮಂತ ಹುಸೇನಪ್ಪ ಬಂಧಿತ ವ್ಯಕ್ತಿ. ಬಾದರ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕ ಅಧಿಕಾರಿಯಾಗಿ ಹನುಮಂತ ಹುಸೇನಪ್ಪ ಕೆಲಸ ಮಾಡುತ್ತಿದ್ದ. ಮೊದಲ ಹೆಂಡತಿ ಸಾವು ಕಂಡ ಬಳಿಕ 2ನೇ ಮದುವೆಯಾಗಿದ್ದ. ಆದರೆ, ಗಂಡನ ಜೊತೆ ಜಗಳ ಮಾಡಿಕೊಂಡು ಈಕೆ ಬಿಟ್ಟುಹೋಗಿದ್ದಳು. ಆದರೆ, ಹನುಮಂತ ಹುಸೇನಪ್ಪ ಸರ್ಕಾರಿ ನೌಕರಿ ಇದ್ದ ಕಾರಣಕ್ಕೆ ಕೊಪ್ಪಳ ತಾಲ್ಲೂಕಿನ ಇಂದರಗಿ ಗ್ರಾಮದ ರೇಣುಕಮ್ಮ ಹೆಸರಿನ ಮಹಿಳೆಯೊಬ್ಬರನ್ನು 3ನೇ ಮದುವೆ ಆಗಿದ್ದ. ಬಳಿಕ ಗಂಗಾವತಿ ನಗರದ ಲಕ್ಷ್ಮಿ ಕ್ಯಾಂಪಿನಲ್ಲಿ ಹೆಂಡತಿ ಜೊತೆ ವಾಸ ಮಾಡುತ್ತಿದ್ದ. 2002 ರಲ್ಲಿ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ್ದ ಹುಸೇನಪ್ಪ, ಗೋಣಿಚೀಲದಲ್ಲಿ ಮಹಿಳೆಯ ಶವ ತುಂಬಿ ಇದರಲ್ಲಿ ಲಗೇಜ್ ಇದೆಯೆಂದೂ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಸರ್ಕಾರಿ ಬಸ್ಸಿನಲ್ಲಿ ಕಳುಹಿಸಿದ್ದ. ಆದರೆ, ಕಂಪ್ಲಿಗೆ ಹೋದ ಬಳಿಕ ಗೋಣಿ ಚೀಲದಲ್ಲಿ ಶವ ಕಂಡಿದ್ದ ಕಂಡಕ್ಟರ್‌, ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗಿ ಗಂಗಾವತಿ ನಗರ ಠಾಣೆಯಲ್ಲಿ ದೂರು ನೀಡಿದ್ದರು, ಆದರೆ, ಅಷ್ಟರಲ್ಲಾಗಲೇ ಹನುಮಂತಪ್ಪ ತನ್ನ ಊರನ್ನು ಬಿಟ್ಟು, 23 ವರ್ಷಗಳಿಂದ ಅಲೆಮಾರಿಯ ರೀತಿ ಜೀವನ ಸಾಗಿಸುತ್ತಿದ್ದ. ಇತ್ತಿಚೆಗೆ ಸ್ವಗ್ರಾಮ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಾಲದಾಳ ಗ್ರಾಮಕ್ಕೆ ಬಂದಿದ್ದ ಹನುಮಂತಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button