ಧಾರ್ಮಿಕ

ಕೋಟೇಶ್ವರ:ವೈಭವದಿಂದ ಸಂಪನ್ನಗೊಂಡ ಶ್ರೀ ರಾಮೋತ್ಸವ – ಅಮೃತೋತ್ಸವ

Views: 53

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರದ ಪ್ರಸಿದ್ಧ ಶ್ರೀ ಕೋದಂಡ ರಾಮಮಂದಿರದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆ, ಪ್ರತಿಷ್ಠಾ ವರ್ಧಂತಿ ಹಾಗೂ ಬ್ರಹ್ಮ ಕಲಶೋತ್ಸವಗಳು ಅಖಂಡ ಶ್ರೀ ರಾಮ ಭಜನಾ ಸಪ್ತಾಹಪೂರ್ವಕ ಶ್ರೀ ರಾಮೋತ್ಸವದೊಂದಿಗೆ ಸಮಾಪನೆಯ ಹಂತಕ್ಕೆ ಬರುತ್ತಿದೆ. ಮಾರ್ಚ್ 30ಸೂರ್ಯೋದಯದಿಂದಾರಂಭಗೊಂಡ ಅಖಂಡ ಭಜನೆ ಏ. 6ರ ಭಾನುವಾರ ಶ್ರೀ ರಾಮ ನವಮಿಯ ಸೂರ್ಯೋದಯಕ್ಕೆ ದೀಪ ವಿಸರ್ಜನೆಯೊಂದಿಗೆ ಭಜನಾ ಮಂಗಲವಾಯಿತು.

ಶ್ರೀ ರಾಮ ಮಂದಿರ – ಭಜನಾ ಸಪ್ತಾಹದ ಹಿನ್ನೆಲೆ ಭಗವಂತನ ನಾಮ ಸ್ಮರಣೆ ಮಾಡುತ್ತಾ ಹರಿದಾಸ ಸಾಹಿತ್ಯವನ್ನು ಮನೆಮನೆಗಳಲ್ಲಿ ಪಠಿಸುತ್ತಾ ಭಜನಾ ರೂಪದಲ್ಲಿ ಬೆಳೆಸಿಕೊಂಡು ಬಂದವರು ನಮ್ಮ ಕೋಟೇಶ್ವರ ಮಾಗಣೆಯ ಹಿರಿಯರು. ನಲವತ್ತರ ದಶಕದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಶ್ರೀ ಗೋಪಾಲಕೃಷ್ಣ ಗುಡಿಯಲ್ಲಿ ಮೂಡುಹಂಗಳೂರು ನಾರಣಪ್ಪಯ್ಯ ಹಾಗೂ ಅರೆಬೈಲ್ ಸೀತಾರಾಮ ತವಳರ ನೇತೃತ್ವದಲ್ಲಿ ಭಜನಾ ಸಪ್ತಾಹ ನಡೆಯುತ್ತಿತ್ತು. ನಂತರ ಅಮಾಸೆಬೈಲು ಶ್ರೀ ರಾಮ ಐತಾಳರು ದಾನವಾಗಿ ನೀಡಿದ ಭೂಮಿಯು ಮೂಡುಹಂಗಳೂರು ನಾರಣಪ್ಪಯ್ಯನವರ ನೇತೃತ್ವದ ಟ್ರಸ್ಟ್ ಗೆ ಹಸ್ತಾಂತರವಾಗಿ ಮಾಗಣೆ ಬಂಧುಗಳ ಸಹಕಾರದಲ್ಲಿ 1950ರಲ್ಲಿ ಶ್ರೀ ಕೋದಂಡರಾಮ ಮಂದಿರದ ಉಗಮವಾಯಿತು. ನಂತರ ಕುಂಭಾಸಿ ಪಾಟಾಳಿ ಕುಟುಂಬದವರು ದಾನವಾಗಿ ನೀಡಿದ ಜಾಗವನ್ನು ಸೇರಿಸಿಕೊಂಡು ಒಂದು ಸುಸಜ್ಜಿತ ಮಂದಿರ ನಿರ್ಮಾಣವಾಯಿತು. ತೆಕ್ಕಟ್ಟೆ ಚಾತ್ರ ಸಹೋದರರಾದ ರಾಮಕೃಷ್ಣ ಚಾತ್ರ, ರಾಘವೇಂದ್ರ ಚಾತ್ರ ಹಾಗೂ ಗೋಪಾಲ ಚಾತ್ರರು ಉತ್ತರ ಭಾರತದ ರಾಜಸ್ತಾನದಿಂದ ಅಮೃತ ಶಿಲೆಯಲ್ಲಿ ನಿರ್ಮಿತವಾದ ಹನುಮದ್ ಸೇವಿತ ಶ್ರೀ ರಾಮ ಲಕ್ಷ್ಮಣ ಸೀತಾ ಮೂರ್ತಿಗಳನ್ನು ತಂದು ಶ್ರೀ ಸೋದೆ ಮಠದ ಆಗಿನ ಪೀಠಾಧಿಪತಿ ಶ್ರೀ ವಿಶ್ವೋತ್ತಮ ತೀರ್ಥರ ಕರಕಮಲಗಳಿಂದ ಪ್ರತಿಷ್ಠಾಪಿಸಿ ಇತಿಹಾಸವನ್ನೇ ನಿರ್ಮಿಸಿದರು.

ಅಂದಿನಿಂದ ಪ್ರತೀ ವರ್ಷ ರಾಮನವಮಿ ಸಮಯದಲ್ಲಿ ಏಳು ದಿನಗಳ ಕಾಲ ಅಖಂಡ ಭಜನೋತ್ಸವವನ್ನು ನಡೆಸಿಕೊಂಡು ಬಂದಿರುವ ನಮ್ಮ ಹಿರಿಯರು, ಈ ಭಾಗದಲ್ಲಿ ಧಾರ್ಮಿಕ ಚಟುವಟಿಕೆಗಳ ಪುನರುತ್ಥಾನಕ್ಕೆ ಕಾರಣರಾದರು. ಇದೀಗ ಮಂದಿರ ಅಮೃತೋತ್ಸವವನ್ನು ಆಚರಿಸುತ್ತಿದೆ.

ಏ. 3 ರ ಗುರುವಾರ ಬ್ರಹ್ಮ ಕಲಶಾಭಿಷೇಕ ವೈಬಗವದಿಂದ ನಡೆದಿದೆ. ಸಾನ್ನಿಧ್ಯವಹಿಸಿದ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥರು ಸನ್ನಿಧಿಯಲ್ಲಿ ಪಟ್ಟದ ದೇವರ ಪೂಜೆ ನೆರವೇರಿಸಿ, ದಾನಿಗಳು ಕೊಡಮಾಡಿದ ಸುಮಾರು ನಾಲ್ಕು ಲಕ್ಷ ರೂ ಮೌಲ್ಯದ ನೂತನ ಶ್ರೀ ರಾಮ ರಥವನ್ನು ರಾಮಾರ್ಪಣೆಗೊಳಿಸಿದರು.

ಶ್ರೀ ರಾಮ ನವಮಿಯ ಭಾನುವಾರ ಶ್ರೀ ರಾಮೋತ್ಸವದಂಗವಾ ಶ್ರೀ ಸೀತಾರಾಮ ಕಲ್ಯಾಣೋತ್ಸವ: ಶ್ರೀ ಲಕ್ಷ್ಮಿಶೋಭಾನ ಪಠಣ. ಶ್ರೀ ರಾಮ ರಕ್ಷಾ ಸ್ತೋತ್ರ ಪಠಣ, ರಾಮರಕ್ಷಾ ಮಂತ್ರ ಹೋಮ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.

ಸಂಜೆ ನೂತನ ಶ್ರೀ ರಾಮರಥದಲ್ಲಿ, ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ವೈಭವೋಪೇತ ಪುರಮೆರವಣಿಗೆ ನಡೆಸಲಾಯಿತು. ಬಹುಬಗೆಯ ಆಕರ್ಷಕ ಸ್ತಬ್ದ ಚಿತ್ರಗಳು, ಕುಣಿತ ಭಜನೆ, ದಾಸರ ದಿರಿಸಿನ ಯೋಗೀಶರ ವಿಶೇಷ ನೃತ್ಯ, ಮಂಗಳ ವಾದ್ಯ ನಾದ, ಚಂಡೆ, ತ್ರಾಸೆಗಳ ಅಬ್ಬರ ಮೆರವಣಿಗೆಗೆ ಇನ್ನಷ್ಟು ಕಳೆಗಟ್ಟಿಸಿದ್ದವು. ನಗರದಾದ್ಯಂತ ನೂತನ ರಾಮ ರಥ ಸಂಚರಿಸುವಾಗ ಜನರು ರಥದಲ್ಲಿನ ಶ್ರೀ ರಾಮ – ಸೀತೆ – ಲಕ್ಷ್ಮಣ – ಹನುಮಂತರಿಗೆ ಆರತಿ ಬೆಳಗಿ ಕೃತಾರ್ಥರಾದರು. ನಂತರ ರಾತ್ರಿ ಮಹಾ ಮಂಗಳಾರತಿ, ಅಷ್ಟಾವಧಾನ, ವಸಂತಪೂಜೆ ನಡೆದವು.

ಸೋಮವಾರ ಬೆಳಿಗ್ಗೆ ಶ್ರೀ ಕೋಟಿತೀರ್ಥ ಸರೋವರದಲ್ಲಿ ಅವಭ್ರತ ತೀರ್ಥಸ್ನಾನ, ನಂತರ ಪಟ್ಟಾಭಿಷೇಕ ಹೋಮ, ಸಂಪ್ರೂಕ್ಷಣೆಯೊಂದಿಗೆ ಅಮೃತೋತ್ಸವ ಸಮಾರಂಭಗಳು ಸಮಾಪನಗೊಂಡ ವು. ಉತ್ಸವಗಳ ನಿರ್ವಹಣೆಯಲ್ಲಿ ಸಮಿತಿಯ ಅಧ್ಯಕ್ಷ ಕೆ ಎಸ್ ಸತ್ಯಮೂರ್ತಿ, ಗೌರವಾಧ್ಯಕ್ಷ ನೇರಂಬಳ್ಳಿ ರಾಘವೇಂದ್ರ ರಾವ್, ಉಪಾಧ್ಯಕ್ಷ ಜಗದೀಶ್ ರಾವ್, ಕಾರ್ಯದರ್ಶಿ ವೆಂಕಟೇಶಮೂರ್ತಿ ಭಟ್, ಸದಸ್ಯರಾದ ಗಜೇಂದ್ರ ಹೆಬ್ಬಾರ್, ಸತ್ಯನಾರಾಯಣ ವರ್ಣ, ರಾಮಚಂದ್ರ ಗೋಟ, ಅಮೃತೋತ್ಸವ ಸಮಿತಿಯ ಜಿ. ಶ್ರೀನಿವಾಸ ರಾವ್, ರಾಮಚಂದ್ರ ವರ್ಣ, ಅಮೃತ ತವಳ, ವಾದಿರಾಜ ಹೆಬ್ಬಾರ್, ಶ್ರೀಪಾದ ಭಟ್, ಗೋಪಾಡಿ ಗಣೇಶ್ ಭಟ್, ವಾಸುದೇವ ರಾವ್, ಕೃಷ್ಣಮೂರ್ತಿ ಕಡೇಕಾರ್, ಶ್ರೀನಿವಾಸ ಮೂರ್ತಿ, ಸೀತಾರಾಮ ಧನ್ಯ, ವಿವಿಧ ಉಪಸಮಿತಿಗಳವರು, ಸಂಘ ಸಂಸ್ಥೆಗಳವರು, ಪರಿಸರದ ನಿವಾಸಿಗಳು, ಭಜನಾ ತಂಡಗಳವರು, ಊರವರು ಸಹಕರಿಸಿದ್ದರು.

Related Articles

Back to top button