ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ, ಹಣ ಪಡೆದ ಬ್ರೋಕರ್ ನಾಪತ್ತೆ

Views: 153
ಕನ್ನಡ ಕರಾವಳಿ ಸುದ್ದಿ: ಹೆಣ್ಣು ಸಿಗದ ಕೊರಗಿನಲ್ಲಿದ್ದ ಯುವಕನಿಗೆ ಮದುವೆ ಮಾಡಿಸಿದ ನಂತರ ಪತ್ನಿ ಮತ್ತು ಮದುವೆ ಮಾಡಿಸಿದ ಬ್ರೋಕರ್ ನಾಪತ್ತೆಯಾದ ಘಟನೆ ನಡೆದಿದೆ.
ಯುವಕನಿಂದ 4ಲಕ್ಷ ರೂ. ಪಡೆದ ವಂಚಕರ ಗುಂಪು ಶಿವಮೊಗ್ಗ ಮೂಲದ ಮಹಿಳೆಯೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆ ಬಳಿಕ ವಿವಾಹಿತ ಮಹಿಳೆ ಹಾಗೂ ಹಣ ಪಡೆದ ಬ್ರೋಕರ್ ಗಳು ಪರಾರಿಯಾಗಿದ್ದು, ಮೋಸಹೋಗಿರುವ ಯುವಕ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯ ದೊರೆಕಿಸಿಕೊಡುವಂತೆ ಅಂಗಲಾಚುತ್ತಿದ್ದಾನೆ.
ಬಿದರಿ ಗ್ರಾಮದ ಸೋಮಶೇಖರ ಗುಲಗಾಲಜಂಬಗಿ ಎಂಬಾತ ಕಳೆದ ವರ್ಷ ತನ್ನ ಮದುವೆ ಮಾಡಿಸುವಂತೆ ಬ್ರೋಕರ್ ಗಳಿಗೆ ನಾಲ್ಕು ಲಕ್ಷ ರೂ. ನೀಡಿದ್ದ ಹಣ ಪಡೆದ ಬ್ರೋಕರ್ ಗಳು ಶಿವಮೊಗ್ಗ ಮೂಲದ ಮಹಿಳೆಯೊಂದಿಗೆ ಸೋಮಶೇಖರನ ಮದುವೆಯನ್ನು ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮಾಡಿದ್ದರು. ಆದರೆ ಮದುವೆಯಾದ ಒಂದೇ ತಿಂಗಳಿನಲ್ಲಿ ಮಹಿಳೆ ಸೋಮಶೇಖರನನ್ನು ಬಿಟ್ಟು ಹೊರಟುಹೋಗಿದ್ದಾಳೆ. ಈ ಬಗ್ಗೆ ವಿಚಾರಿಸಲು ಸೋಮಶೇಖರ ಬ್ರೋಕರ್ ಗಳನ್ನು ಸಂಪರ್ಕಿಸಲು ಮುಂದಾದಾಗ ಅವರು ನಾಪತ್ತೆಯಾಗಿದ್ದಾರೆ. ಪತ್ನಿ ಹಾಗೂ ಹಣ ಎರಡನ್ನೂ ಕಳೆದುಕೊಂಡು ಕಂಗಾಲಾಗಿರುವ ಸೋಮಶೇಖರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಮಹಿಳೆಗೆ ಮೂರನೇ ಮದುವೆಯಾಗಿ ಮಕ್ಕಳಿದ್ದವಳು!
ಸೋಮಶೇಖರನನ್ನು ವಿವಾಹವಾಗಿರುವ ಮಹಿಳೆ ಶಿವಮೊಗ್ಗ ಮೂಲದವಳಿದ್ದು, ಈ ಹಿಂದೆಯೇ ಅವಳಿಗೆ ಎರಡು ಮದುವೆಯಾಗಿ ಮಕ್ಕಳಿರುವುದಾಗಿ ತಿಳಿದುಬಂದಿದೆ.






