ಪ್ರಿಯಕರನೊಂದಿಗೆ ಸೇರಿ ಸುಪಾರಿ ಕೊಟ್ಟು ಪತಿಯನ್ನೇ ಹತ್ಯೆ ಮಾಡಿದ ಪತ್ನಿ!
Views: 16
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನೊಂದಿಗೆ ಸೇರಿ ಸುಪಾರಿ ಕೊಟ್ಟು ಪತಿಯನ್ನೇ ಹತ್ಯೆ ಮಾಡಿಸಿದ್ದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ದೊಣೆಹಳ್ಳಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಬಸವರಾಜ್ (37) ಕೊಲೆಯಾದವ.
ಈತ ಪತ್ನಿ ಸುನೀತಾ, ಆಕೆಯ ಪ್ರಿಯಕರ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ಎಂಬುವರು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಪಿಐ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿ ಪತ್ನಿ ಸುನೀತಾ, ಆಕೆಯ ಪ್ರಿಯಕರ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ಮತ್ತು ಕೃತ್ಯಕ್ಕೆ ಸಹಾಯ ಮಾಡಿದ ಓಂಕಾರಪ್ಪನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ಜೊತೆ ಸುನೀತಾ ವಿವಾಹೇತರ ಸಂಬಂಧ ಹೊಂದಿದ್ದ ವಿಚಾರವನ್ನು ತಿಳಿದು ಪತಿ ಬಸವರಾಜ್ ಮನೆಯಲ್ಲಿ ಜಗಳವಾಡಿದ್ದರು. ಇದೇ ವಿಷಯವಾಗಿ ಪತ್ನಿ ಹಾಗೂ ಪ್ರಿಯಕರ ಸೇರಿ ಪತಿ ಕೊಲೆಗೆ ಚಿತ್ರದುರ್ಗ ಮೂಲದ ಇಬ್ಬರಿಗೆ ಎರಡು ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು ಪಿಐ ತಿಳಿಸಿದ್ದಾರೆ.
ಜೂನ್ 25 ರಂದು ಪಡಿತರ ತರಲು ಹೋಗಿದ್ದ ಬಸವರಾಜ್ ನನ್ನು ಆರೋಪಿಗಳಾದ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ, ಓಂಕಾರಪ್ಪ ಇಬ್ಬರು ಸೇರಿ ಸಾಲ ಕೊಡಿಸುವುದಾಗಿ ನಂಬಿಸಿ ಕಂಠಪೂರ್ತಿ ಮದ್ಯಪಾನ ಮಾಡಿಸಿ ದೊಣೆಹಳ್ಳಿ ಕ್ರಾಸ್ ನಿಂದ ಕಾರಿನಲ್ಲಿ ಕರೆದೊಯ್ದಿದ್ದರು. ಬಳಿಕ ಕತ್ತು ಹಿಸುಕಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಬಳಿಕ ತುಮಕೂರು ಜಿಲ್ಲೆಯ ಹುಳಿಯಾರ್ ಬಳಿಯ ಕುದುರೆ ಕಣಿವೆ ಅರಣ್ಯ ಪ್ರದೇಶದಲ್ಲಿ ಮೃತದೇಹ ಎಸೆದಿದ್ದರು. ಈ ಕುರಿತು ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕೊಲೆ ಮಾಡಿ ಒಂದು ತಿಂಗಳ ನಂತರ ನಾಪತ್ತೆ ಪ್ರಕರಣ ದಾಖಲು ಮಾಡಿದ್ದ ಪತ್ನಿ: ಜೂನ್ ತಿಂಗಳಲ್ಲಿ ಕೊಲೆ ಮಾಡಿದ್ದು, ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಪತ್ನಿ ಸುನೀತಾ ಜಗಳೂರು ಠಾಣೆಗೆ ಆಗಮಿಸಿ ಜುಲೈ ತಿಂಗಳಿನಲ್ಲಿ ಪ್ರಕರಣ ದಾಖಲು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬರೋಬ್ಬರಿ ಒಂದು ತಿಂಗಳ ನಂತರ ಮಿಸ್ಸಿಂಗ್ ಪ್ರಕರಣ ದಾಖಲು ಮಾಡಿದ್ದರಿಂದ ಪೊಲೀಸರಿಗೆ ಅನುಮಾನ ಹುಟ್ಟಿತ್ತು. ತಕ್ಷಣ ಕಾರ್ಯಪ್ರವೃತರಾದ ಪಿಐ ಸಿದ್ದರಾಮಯ್ಯ ಅವರ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಹಾಗೂ ಕೂಲಂಕಷವಾಗಿ ತನಿಖೆ ಬಳಿಕ ಈ ಕೊಲೆ ಪ್ರಕರಣ ಬಯಲಾಗಿದೆ.
ಪಡಿತರ ತರಲು ಹೋಗಿದ್ದ ಬಸವರಾಜ್ ನನ್ನು ಆರೋಪಿಗಳು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಹೋದವನು ಬರಲೇ ಇಲ್ಲ. ಆಗ ಪತ್ನಿಯ ಮೂಲಕ ಕಾಣೆಯಾದ ಪ್ರಕರಣ ದಾಖಲು ಮಾಡಿದ್ದೆವು. ಪೊಲೀಸರು ತನಿಖೆ ಮಾಡ್ತೀವಿ ಎಂದು ಹೇಳಿದ್ರು. ತಿಪ್ಪೇಸ್ವಾಮಿ ಯಾರು ಇಲ್ಲದ ವೇಳೆ ಊರಿಗೆ ಬರುತ್ತಿದ್ದನು ಎಂದು ಮೃತರ ಸಹೋದರ ರಂಗನಾಥ್ ತಿಳಿಸಿದ್ದಾರೆ.
“ಸಾಲ ಕೊಡಿವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಬಸವರಾಜ್ ಕೆಲಸಕ್ಕೆ ಹೋಗಿದ್ದಾನೆ ಎಂದು ಕೊಂಡಿದ್ದೇವು. ಹುಳಿಯಾರು ಠಾಣೆಯ ವ್ಯಾಪ್ತಿಯಲ್ಲಿ ಶವ ದೊರೆತ ಬಳಿಕ ನಮಗೆ ಕೊಲೆಯಾಗಿದೆ ಎಂದು ಗೊತ್ತಾಗಿದೆ. ನಮ್ಮ ಅಣ್ಣನಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ. ಇವರ ವಿವಾಹೇತರ ಸಂಬಂಧಕ್ಕೆ ನಮ್ಮಣ್ಣ ಅಡ್ಡಿಯಾಗ್ತಾನೆ ಎಂದು ಕೊಲೆ ಮಾಡಿದ್ದಾರೆ ” ಎಂದು ಮೃತರ ಸಹೋದರ ಮಂಜುನಾಥ್ ದೂರಿದ್ದಾರೆ.






