ಯುವತಿ ಪ್ರೀತಿ ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೊಬೈಲ್ ಟವರ್ ಏರಿದ ಯುವಕ!
Views: 0
ಕನ್ನಡ ಕರಾವಳಿ ಸುದ್ದಿ: ತಾನು ಪ್ರೀತಿಸಿದ ಯುವತಿಗೆ ಮದುವೆ ಮಾಡಿಸುವಂತೆ ಹಠ ಹಿಡಿದಿರುವ ಯುವಕನೊಬ್ಬ ಮೊಬೈಲ್ ಟವರ್ ಏರಿ ಕುಳಿತ ಘಟನೆ ಗಂಗಾವತಿಯಲ್ಲಿ ನಡೆದಿದ್ದು, ಆತಂಕದ ಸೃಷ್ಟಿಸಿದೆ.
ಮೊಬೈಲ್ ಟವರ್ ಏರಿದ ಯುವಕ ಒನ್ ಸೈಡ್ ಲವ್ ಸ್ಟೋರಿ ಎಂಬುದು ವಿಶೇಷ. ಗಂಗಾವತಿ ತಾಲೂಕು ಹಣವಾಳ ಗ್ರಾಮದ ರಾಜ ತಂದೆ ನೀಲಪ್ಪ ಮೊಬೈಲ್ ಟವರ್ ಏರಿದ ಯುವಕ. ಕೆಳಗೆ ನಿಂತವರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ, ಟವರ್ ಮೇಲಿಂದ ಕೆಳಗಿಳಿಯಲು ಯುವಕ ಮುಂದಾಗುತ್ತಿಲ್ಲ. ಬದಲಾಗಿ ಮೊಬೈಲ್ ಟವರ್ ಮೇಲೆ ನಡೆದಾಡುವ ಮೂಲಕ ಕಪಿ ಚೇಷ್ಟೆ ಮಾಡಿದ್ದಾನೆ.
ಯುವತಿ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದ ಪತ್ರವೊಂದನ್ನು ಟವರ್ ಮೇಲಿನಿಂದ ಕೆಳಗೆ ಎಸೆದಿದ್ದಾನೆ. ಬಳಿಕ ಯುವತಿಯನ್ನು ಸ್ಥಳಕ್ಕೆ ಕರೆಸುವಂತೆ ಪೊಲೀಸರ ಬಳಿ ಪಟ್ಟು ಹಿಡಿದಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ರಾಜುವಿನ ಮನವೊಲಿಸಿ ಕೆಳಗಿಳಿಸಲು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಯುವಕ ಕೆಳಗೆ ಇಳಿಯಲು ನಿರಾಕರಿಸಿದ್ದರಿಂದ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ಮುಂದುವರಿಯಿತು.
ರಾತ್ರಿ 8 ಗಂಟೆಯಾದರೂ ಟವರ್‌ನಿಂದ ಕೆಳಗಿಳಿಯದ ರಾಜು, ಯುವತಿಯನ್ನು ಸ್ಥಳಕ್ಕೆ ಕರೆಸಿದ ಬಳಿಕವೇ ಕೆಳಗಿಳಿಯುವುದಾಗಿ ಪಟ್ಟು ಹಿಡಿದಿದ್ದ. ಅಂತಿಮವಾಗಿ ಯುವತಿಯನ್ನು ಸ್ಥಳಕ್ಕೆ ಕರೆಸಿದ ಬಳಿಕ ರಾಜು ಟವರ್‌ನಿಂದ ಕೆಳಗಿಳಿದಿದ್ದಾನೆ.






