ಜನಮನ

ಕಿರುಕುಳ ಆರೋಪ:ತಹಶೀಲ್ದಾರ್ ಕಚೇರಿಯಲ್ಲೇ ದ್ವಿತೀಯ ದರ್ಜೆ ಸಹಾಯಕ ಆತ್ಮಹತ್ಯೆ

Views: 113

ಕನ್ನಡ ಕರಾವಳಿ ಸುದ್ದಿ : ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್.ಡಿ.ಎ. ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ರುದ್ರಣ್ಣ ಯಡವಣ್ಣವರ (35) ಆತ್ಮಹತ್ಯೆಗೆ ಶರಣಾದ ದ್ವಿತೀಯ ದರ್ಜೆ ಸಹಾಯಕ

ತಹಶೀಲ್ದಾರ್ ಬಸವರಾಜ ನಾಗರಾಳ ಅವರ ಕೊಠಡಿಯಲ್ಲಿ ಇವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ನಿನ್ನೆಯಷ್ಟೇ ಸವದತ್ತಿ ತಹಶೀಲ್ದಾರ್ ಕಚೇರಿಗೆ ರುದ್ರಣ್ಣ ಯಡವಣ್ಣವರ ವರ್ಗಾವಣೆಗೊಂಡಿದ್ದರು. ಇಂದು ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನು ಮೃತ ರುದ್ರಣ್ಣ ಯಡವಣ್ಣವರ ಪತ್ನಿ ಸೇರಿ ಕುಟುಂಬಸ್ಥರು ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಕಚೇರಿಗೆ ದೌಡಾಯಿಸಿದರು. ಈ ವೇಳೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಖಡೇಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಪೊಲೀಸರ ತನಿಖೆಯಿಂದ ಸ್ಪಷ್ಟವಾಗಲಿದೆ.

ಡಿಸಿಪಿ ರೋಹಣ ಜಗದೀಶ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. “ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಒಂದು ವೇಲ್ ಮೂಲಕ ನೇಣು ಹಾಕಿಕೊಳ್ಳಲಾಗಿದೆ. ಇನ್ನು ತಹಶೀಲ್ದಾರ್ ಕೊಠಡಿಯಲ್ಲಿ ಸಿಸಿಟಿವಿ ಕಂಡು ಬಂದಿಲ್ಲ. ಹೊರಗಡೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ. ಇನ್ನು ಮೃತ ವ್ಯಕ್ತಿ ಕುಟುಂಬಸ್ಥರು ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುತ್ತೇವೆ” ಎಂದರು.

ಮೇಲಾಧಿಕಾರಿಗಳ ಕಿರುಕುಳ ಆರೋಪ: ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟಯ ಎಲ್ಲರೂ ಒಟ್ಟಾಗಿ ಹೋರಾಡಿ. ನನ್ನ ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳ ಕಾರಣ ಎಂದು ರುದ್ರಣ್ಣ ಅವರು ಸಿಬ್ಬಂದಿಯ ವಾಟ್ಸಾಪ್ ಗ್ರೂಪ್ನಲ್ಲಿ ಬರೆದುಕೊಂಡಿದ್ದರು ಎನ್ನಲಾಗಿದೆ

Related Articles

Back to top button
error: Content is protected !!