ವಿದ್ಯಾರ್ಥಿನಿಯರು, ಶಿಕ್ಷಕಿಯರ ಅಶ್ಲೀಲ ಫೋಟೋಗಳ ಮಾರಾಟ:ಬೆಳಕಿಗೆ ಬಂದ ಶಾಕಿಂಗ್ ಪ್ರಕರಣ!
Views: 60
ಕನ್ನಡ ಕರಾವಳಿ ಸುದ್ದಿ: ಕೊಚ್ಚಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಮಾರ್ಫ್ ಮಾಡಿದ ಅಸಭ್ಯ ಫೋಟೋಗಳನ್ನು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಾರಾಟ ಮಾಡುತ್ತಿದ್ದ ಆಘಾತಕಾರಿ ಕೃತ್ಯ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಕ್ಕಾಕರ ಭರತ್ ಮಾತಾ ಕಾಲೇಜಿನ ವಿದ್ಯಾರ್ಥಿಯಾಗಿರುವ ಶ್ರೀಹರಿ ಎಂಬಾತನನ್ನು ಬಂಧಿಸಲಾಗಿದ್ದು, ಆತನ ಮೊಬೈಲ್ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಅನುಮತಿಯೊಂದಿಗೆ ಶ್ರೀಹರಿಯ ಮೊಬೈಲ್ ಫೋನ್ ಅನ್ನು ಪರಿಶೀಲನೆ ನಡೆಸಿದ ವಿದ್ಯಾರ್ಥಿಗಳಿಗೆ ಕೃತ್ಯದ ಭೀಕರತೆ ಕಣ್ಣಿಗೆ ಗೋಚರಿಸಿದೆ. ಫೋನ್ ತುಂಬಾ ವಿದ್ಯಾರ್ಥಿನಿಯರ ಮಾರ್ಫ್ ಮಾಡಿದ ಅಸಭ್ಯ ಚಿತ್ರಗಳೇ ತುಂಬಿದ್ದವು. ಅಲ್ಲದೆ, ಶಿಕ್ಷಕಿಯರ ಅಶ್ಲೀಲ ಚಿತ್ರಗಳು ಕೂಡ ಇದ್ದವು.
ಕೇವಲ ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದಷ್ಟೇ ಅಲ್ಲದೆ, ಈ ಅಸಭ್ಯ ಚಿತ್ರಗಳನ್ನು ಟೆಲಿಗ್ರಾಂ ಹಾಗೂ ಇನ್‌ಸ್ಟಾಗ್ರಾಮ್ನ ನಿರ್ದಿಷ್ಟ ಗ್ರೂಪ್‌ಗಳ ಮೂಲಕ ಹಣ ಪಡೆದು ಇತರೆ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಮಾಹಿತಿಯು ತನಿಖೆಯಿಂದ ಬಹಿರಂಗಗೊಂಡಿದೆ. ಈ ಜಾಲವು ದೊಡ್ಡ ಮಟ್ಟದಲ್ಲಿ ವಿಸ್ತರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ತರಗತಿಗಳಲ್ಲಿ ಪಾಠ ಮಾಡುವ ಶಿಕ್ಷಕಿಯರ ದೃಶ್ಯಗಳನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಬಳಿಕ ಅತ್ಯಂತ ವಿಕೃತವಾಗಿ ಅಶ್ಲೀಲ ಚಿತ್ರಗಳನ್ನಾಗಿ ಮಾರ್ಫ್ ಮಾಡುವ ಕೃತ್ಯವನ್ನು ಆರೋಪಿ ನಡೆಸುತ್ತಿದ್ದ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ನಗ್ನ ಚಿತ್ರಗಳನ್ನು ಹಂಚಿಕೊಳ್ಳಲೆಂದೇ ಪ್ರತ್ಯೇಕವಾದ ಸಾಮಾಜಿಕ ಜಾಲತಾಣದ ಗುಂಪುಗಳು ಸಕ್ರಿಯವಾಗಿರುವುದನ್ನು ವಿದ್ಯಾರ್ಥಿಗಳು ಮತ್ತು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.






