ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್: ಶಿಕ್ಷಕರ ದಿನಾಚರಣೆ – ಗುರುವಂದನೆ

Views: 43
ಕುಂದಾಪುರ: ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಕೋಟೇಶ್ವರ ವಲಯ ವತಿಯಿಂದ, ವಲಯದ ಹಿರಿಯ ಶಿಕ್ಷಕರೋರ್ವರನ್ನು ಗೌರವಿಸುವುದರ ಮೂಲಕ ಶಿಕ್ಷಕರ ದಿನಾಚರಣೆಯ ಗುರುವಂದನೆಯನ್ನು ಸಲ್ಲಿಸಲಾಯಿತು.
ವಲಯಾಧ್ಯಕ್ಷ ಬಿ. ವಾದಿರಾಜ ಹೆಬ್ಬಾರ್ ನೇತೃತ್ವದಲ್ಲಿ ಕೋಟೇಶ್ವರದ ಮಠದಬೆಟ್ಟು ಎಂಬಲ್ಲಿನ ನಿವಾಸಿ ನಿವೃತ್ತ ಶಿಕ್ಷಕ ವೆಂಕಟರಮಣ ಐತಾಳರ ನಿವಾಸಕ್ಕೆ ತೆರಳಿದ ಸದಸ್ಯರು ಸನ್ಮಾನ – ಗುರುವಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸದಸ್ಯ, ಪರಿಷತ್ ಪೂರ್ವಾಧ್ಯಕ್ಷ ಪ್ರೊ. ಶಂಕರ ರಾವ್ ಕಾಳಾವರ, ಶಿಕ್ಷಕರದು ಬಹು ಘನವೆತ್ತ ವೃತ್ತಿ. ನಿಷ್ಠಾವಂತ ಶಿಕ್ಷಕ ಸದಾ ತನ್ನ ಶಿಷ್ಯರ ಅಭಿವೃದ್ಧಿಯನ್ನೇ ಹಾರೈಸುತ್ತಾನೆ. ಆದರೆ, ಶಿಕ್ಷಕರಲ್ಲೇ ಬಹುವಿಧದವರು ಇದ್ದಾರೆ. ಕೇವಲ ಶಾಲೆ ಅಥವಾ ಕಾಲೇಜಿಗೆ ಹೋಗಿ ಬರುವವರು, ಆಡಳಿತವರ್ಗ, ವಿದ್ಯಾರ್ಥಿಗಳ ಬಗ್ಗೆಯೇ ಸದಾ ಟೀಕೆ ಟಿಪ್ಪಣಿ ಮಾಡುತ್ತಿರುವವರು, ಯಾವಾಗಲೂ ತಮ್ಮ ಸಂಬಳ, ಸೌಲಭ್ಯಗಳ ಬಗ್ಗೆಯೇ ಚಿಂತಿಸುತ್ತಾ ಲೆಕ್ಕಾಚಾರದಲ್ಲೇ ಮುಳುಗಿರುವವರು ಮತ್ತು ಇದ್ಯಾವುದರ ಕಡೆಯೂ ಗಮನ ಹರಿಸದೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಾ ತಮ್ಮ ವಿದ್ಯಾರ್ಥಿಗಳ ಹಿತಚಿಂತಕರಾಗಿರುವವರು. ಈ ಕೊನೆಯ ವರ್ಗದ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಶಿಕ್ಷಕರ ದಿನಾಚರಣೆ – ಗುರುವಂದನೆ ಕೇವಲ ಸೆಪ್ಟೆಂಬರ್ ಐದಕ್ಕೆ, ಮಾಧ್ಯಮಗಳಲ್ಲಿ ಮಿಂಚಲು ಸೀಮಿತವಾಗದೆ, ತಮಗೆ ವಿದ್ಯಾದಾನ ಮಾಡಿದ ಶಿಕ್ಷಕರನ್ನು ಸದಾ ಸ್ಮರಿಸುವಂತಹ ಮೇಲ್ಪಂಕ್ತಿಗೆ ದಾರಿಯಾಗಬೇಕು ಎಂದು ಕರೆನೀಡಿದರು. ವೆಂಕಟರಮಣ ಐತಾಳರು ಮತ್ತು ತಮ್ಮ ಸುಮಾರು ಕಾಲು ಶತಮಾನದ ಸ್ನೇಹ – ಒಡನಾಟವನ್ನು ಶಂಕರ ರಾವ್ ಸ್ಮರಿಸಿಕೊಂಡರು.
ಅಭಿನಂದನಾ ನುಡಿಗಳನ್ನಾಡಿದ ಪ್ರೊ. ವೆಂಕಟಕೃಷ್ಣ ಐತಾಳರು, ಶಂಕರನಾರಾಯಣದಲ್ಲಿ ಹುಟ್ಟಿಬೆಳೆದು, ದೂರ ಪ್ರದೇಶಗಳಲ್ಲೇ ಸೇವೆ ಸಲ್ಲಿಸಿ, ಇದೀಗ ಕೋಟೇಶ್ವರದಲ್ಲಿ ನೆಲೆಗೊಂಡ ಶಿಕ್ಷಕ ವೆಂಕಟರಮಣ ಐತಾಳರಿಗೂ ಕೋಟೇಶ್ವರಕ್ಕೂ ಇರುವ ನಂಟನ್ನು ಬಿಚ್ಚಿಟ್ಟರು. ಕೋಟೇಶ್ವರದ ರಥಬೀದಿಯ ನಿವಾಸಿ ಲಕ್ಷ್ಮೀನಾರಾಯಣ ಉಡುಪರ ಪುತ್ರಿಯನ್ನು ವಿವಾಹವಾಗಿ ಈ ಊರ ನೆಂಟು ಬೆಳೆಸಿಕೊಂಡರು ಎಂದು ವಿವರಿಸಿದರು. ಅಧ್ಯಾಪಕರೂ ಶ್ರೇಷ್ಠ ವೈದಿಕ ವಿಧ್ವಾಂಸರೂ ಆದ ವೆಂಕಟರಮಣ ಐತಾಳರಿಂದ ಕಿರಿಯರು ಮಾರ್ಗದರ್ಶನ ಪಡೆಯಲಿ ಎಂದು ಹಾರೈಸಿ ಅವರಿಗೆ ಆಯುರಾರೋಗ್ಯ, ನೆಮ್ಮದಿಯನ್ನು ಕೋರಿದರು.
ವಲಯದ ವತಿಯಿಂದ ಅಧ್ಯಕ್ಷ ವಾದಿರಾಜ ಹೆಬ್ಬಾರ್ ಹಿರಿಯರೊಂದಿಗೆ ಕೂಡಿ ವೆಂಕಟರಮಣ ಐತಾಳರನ್ನು ಸಮ್ಮಾನಿಸಿ ಗುರುವಂದನೆ ಸಲ್ಲಿಸಿದರು. ಇಂದು ಸರ್ಕಾರಿ ಶಾಲೆಗಳಲ್ಲೂ ಸೌಲಭ್ಯಗಳು ಹೆಚ್ಚಿವೆ. ವಿದ್ಯೆಯ ಗುಣಮಟ್ಟವೂ ಸುಧಾರಿಸಿದ್ದು, ಶಿಕ್ಷಕರು ಆದರ್ಶ ನಾಗರಿಕರನ್ನು ರೂಪಿಸುವಲ್ಲಿ ಶ್ರದ್ಧೆ ವಹಿಸಬೇಕು ಎಂದು ಕರೆ ನೀಡಿದರು. ವೆಂಕಟರಮಣ ಐತಾಳರಿಗೆ ಶುಭವನ್ನು ಕೋರಿದ ಅವರು, ಬ್ರಾಹ್ಮಣ ಪರಿಷತ್ತಿಗೆ ಸದಾ ಅವರು ಮಾರ್ಗದರ್ಶಕರಾಗಿರಬೇಕು ಎಂದು ಮನವಿ ಮಾಡಿದರು. ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಮತ್ತು ಕಾರ್ಯದರ್ಶಿ ನಾಗರತ್ನ ಉಡುಪ ವೆಂಕಟರಮಣ ಐತಾಳರ ಧರ್ಮ ಪತ್ನಿ ಶಾರದಾರಿಗೆ ಮಂಗಳ ದ್ರವ್ಯಗಳೊಂದಿಗೆ ಉಡಿತುಂಬಿದರು.
ಸನ್ಮಾನದಿಂದ ಭಾವುಕರಾದ ವೆಂಕಟರಮಣ ಐತಾಳರು, ಕೃತಜ್ಞತೆ ಸಮರ್ಪಸಿ ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳನ್ನು ಮೆಲುಕು ಹಾಕಿದರು. 80 ರೂಪಾಯಿ ಸಂಬಳದ ಆ ದಿನಗಳಲ್ಲಿ, ಬಸ್ ಸೌಕರ್ಯವಿರದ ಸ್ಥಳಗಳಿಗೆ ನಡೆದುಕೊಂಡೇ ಹೋದ ಘಟನೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಗೌರವ ಅನುಬಂಧಗಳ ಬಗ್ಗೆ ವಿವರಿಸಿದರು.
ಐತಾಳರ ಸೊಸೆ ರಜನಿ, ವೆಂಕಟೇಶ ಅರಸ್, ವಲಯ ಗೌರವಾಧ್ಯಕ್ಷ ಗಣಪಯ್ಯ ಚಡಗ, ಉಪಾಧ್ಯಕ್ಷ ರಾಘವೇಂದ್ರ ಹತ್ವಾರ್, ಗೌರವ ಸಲಹೆಗಾರರಾದ ವೈ ಎನ್ ವೆಂಕಟೇಶಮೂರ್ತಿ ಭಟ್, ಶ್ರೀನಿವಾಸಮೂರ್ತಿ, ಸೀತಾರಾಮ ಧನ್ಯ, ಶಿವರಾಮ ಉಪಾಧ್ಯ, ವಿವೇಕ್ ಹೆಬ್ಬಾರ್ ಇನ್ನಿತರರು ಉಪಸ್ಥಿತರಿದ್ದರು.
ಕೋಟೇಶ್ವರ ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ನಾಗರತ್ನ ಉಡುಪ ಸ್ವಾಗತಿಸಿ ಪರಿಚಯಿಸಿದರು.
ಕೆ ಜಿ ವೈದ್ಯ ಕಾರ್ಯಕ್ರಮ ನಿರೂಪಿಸಿ, ಅಧ್ಯಕ್ಷ ವಾದಿರಾಜ ಹೆಬ್ಬಾರ್ ವಂದಿಸಿದರು.









