ರಾಜಕೀಯ

ಮುಡಾ ಹಗರಣದಲ್ಲಿ ಮೊದಲ ತಲೆದಂಡ:  ಹಿಂದಿನ ಆಯುಕ್ತ ಜಿ.ಟಿ ದಿನೇಶ್‌ ಕುಮಾರ್‌ ಅಮಾನತು

Views: 94

ಬೆಂಗಳೂರು:  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕವಾಗಿದ್ದ ಜಿ.ಟಿ ದಿನೇಶ್‌ ಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ.

ಮುಡಾ ಹಗರಣದ ಆರೋಪ ಹೊತ್ತಿರುವ  ಆಯುಕ್ತರಾಗಿದ್ದ ದಿನೇಶ್ ಕುಮಾರ್ ಅವರನ್ನು ರಾಜ್ಯ ಸರ್ಕಾರ, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ಸರ್ಕಾರ ವರ್ಗಾಯಿಸಿತ್ತು. ಆದ್ರೆ, ಇದೀಗ ರಾಜ್ಯಪಾಲರ ಆದೇಶಾನುಸಾರವಾಗಿ ದಿನೇಶ್ ಕುಮಾರ್ ಅವರನ್ನು  ಕಾರ್ಯದರ್ಶಿ ಉಮಾದೇವಿ ಅವರು ಇಂದು ಸೆ.02 ರಂದು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೂ ಪಾತ್ರವಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಈ ನಡುವೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದ ಬಳಿಕ ಆಯುಕ್ತ, ಕೆಎಎಸ್ ಅಧಿಕಾರಿ ದಿನೇಶ್ ಕುಮಾರ್ ಅವರನ್ನು ಹಾವೇರಿ ವಿವಿ ಕಲಸಚಿವರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು

ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ತನಿಖೆ ನಡೆಯುತ್ತಿದ್ದರೂ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ಕೂಡಲೇ ಅವರ ನೇಮಕ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿತ್ತು. ಅಧಿಕಾರಿಗಳು ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳಬೇಕು, ಆದರೆ ಆರೋಪ ಕೇಳಿ ಬಂದಾಗಲೂ ಈ ರೀತಿ ನೇಮಕ ಮಾಡಿದ್ದೇಕೆ ಎಂದು ಬಿಜೆಪಿ ಪ್ರಶ್ನಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯ ಇದೀಗ ರಾಜ್ಯಪಾಲರ ಆದೇಶಾನುಸಾರ ಮುಡಾದಿಂದ ಹಾವೇರಿ ವಿವಿ ಕುಲಸಚಿವರಾಗಿದ್ದ ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ.

 

 

Related Articles

Back to top button
error: Content is protected !!