ರಾಜಕೀಯ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರು ಸದ್ಯಕ್ಕೆ ನಿರಾಳ

Views: 54

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಎರಡು ಪ್ರತ್ಯೇಕ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರು ಸದ್ಯಕ್ಕೆ ನಿರಾಳರಾಗಿದ್ದಾರೆ.

ಮುಡಾ ಅಕ್ರಮ ಆರೋಪದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆ ಗವರ್ನರ್‌ ಆದೇಶವನ್ನು ರದ್ದು ಮಾಡುವಂತೆ ಕೋರಿ ಸಿದ್ದರಾಮಯ್ಯ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಅರ್ಜಿಯ ವಿಚಾರಣೆ ಇಂದು ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ನಡೆದಿದೆ. ಸಿಎಂ ಸಿದ್ದರಾಮಯ್ಯ ಪರವಾಗಿ ವಾದ ಮಂಡಿಸಲು ಖುದ್ದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಹಾಜರಾಗಿದ್ದರು.

ಅಭಿಷೇಕ್‌ ಮನು ಸಿಂಘ್ವಿ ಅವರು ಮಂಡಿಸಿದ ವಾದವನ್ನು ಆಲಿಸಿದ ನ್ಯಾಯಾಲಯ, ಸಿಎಂ ಸಿದ್ದರಾಮಯ್ಯಗೆ ಮತ್ತೆ ಎರಡು ದಿನ ರಿಲೀಫ್ ನೀಡಿದೆ. ರಿಟ್ ಅರ್ಜಿಯ ವಿಚಾರಣೆಯನ್ನು ಮುಂದಿನ ಆಗಸ್ಟ್ 31ರ ಶನಿವಾರ ಬೆಳಗ್ಗೆ 10.30ಕ್ಕೆ ಮುಂದೂಡಿಕೆ ಮಾಡಲಾಗಿದೆ.

2004ರವರೆಗೂ ಸಿಎಂಗೆ ಆ ಜಮೀನಿನ ಜೊತೆ ಯಾವ ಸಂಬಂಧವೂ ಇಲ್ಲ. 2004ರಲ್ಲಿ ಸಿದ್ದರಾಮಯ್ಯ ಬಾಮೈದ ಆ ಭೂಮಿಯನ್ನು ಖರೀದಿಸಿದ್ದಾರೆ. 2005ರಲ್ಲಿ ಆ ಜಮೀನಿನ ಭೂ ಪರಿವರ್ತನೆ ಪ್ರಕ್ರಿಯೆ ಮಾಡಲಾಗಿದೆ. 2010ರಲ್ಲಿ ಸಿಎಂ ಪತ್ನಿ ಹೆಸರಿಗೆ ಜಮೀನನ್ನು ಗಿಫ್ಟ್ ಡೀಡ್ ಮಾಡಿದ್ದಾರೆ. ಈ ಯಾವ ಪ್ರಕ್ರಿಯೆಯಲ್ಲೂ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಅವರು ಪ್ರಭಾವವನ್ನು ಬೀರಿಲ್ಲ, ಖಾತೆಯ ಸಚಿವರೂ ಅಗಿರಲಿಲ್ಲ. ಸಿದ್ದರಾಮಯ್ಯ ಪಾತ್ರವೇ ಇಲ್ಲದೇ ಇರುವಾಗ ಸ್ಯಾಂಕ್ಷನ್ ಯಾಕಾಗಿ ಎಂದು ಅಭಿಷೇಕ್ ಮನು ಸಿಂಘ್ವಿ ಅವರು ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್‌ಗೂ ತಾತ್ಕಾಲಿಕ ರಿಲೀಫ್‌

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಿಬಿಐ ಹಾಗೂ ಯತ್ನಾಳ್ಗೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸೋದಕ್ಕೆ ಅವಕಾಶವಿದ್ದು, ಸದ್ಯಕ್ಕೆ ಸಿಬಿಐ ತನಿಖೆಯಿಂದ ಡಿ.ಕೆ. ಶಿವಕುಮಾರ್ ಬಚಾವ್ ಆಗಿದ್ದಾರೆ.

Related Articles

Back to top button
error: Content is protected !!