ಶಾಸಕ ಸೇರಿದಂತೆ ಹಲವು ನಟರಿಂದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ನಟಿ ಮಿನು ಮುನೀರ್

Views: 155
ಕೇರಳ ವಿಧಾನಸಭೆಗೆ ಎರಡು ಬಾರಿ ಆಯ್ಕೆಯಾಗಿರುವ ಸಿಪಿ (ಎಂ) ಶಾಸಕ ಸೇರಿದಂತೆ ಹಲವು ನಟರಿಂದ ಲೈಂಗಿಕ ದೌರ್ಜನ್ಯ ಎದುರಿಸಿದ್ದಾಗಿ ನಟಿ ಮಿನು ಮುನೀರ್ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಿನು ಮುನೀರ್, ನಟರಾದ ಜಯಸೂರ್ಯ, ಮಣಿಯನ್ ಪಿಳ್ಳ ರಾಜು, ಶಾಸಕ ಹಾಗೂ ನಟ ಮುಖೇಶ್, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಮುಖ ನಾಯಕ ಇಡವೇಳ ಬಾಬು ಅವರನ್ನು ಹೆಸರಿಸಿದ್ದಾರೆ. ಮಿನು ಮುನೀರ್ ಅವರ ಆರೋಪಗಳಿಗೆ ಮುಖೇಶ್, ಜಯಸೂರ್ಯ ಮತ್ತು ಬಾಬು ಪ್ರತಿಕ್ರಿಯಿಸಿಲ್ಲ. ರಾಜು ಮಾತ್ರ ತನಿಖೆಗೆ ಸ್ವಾಗತ ಎಂದಿದ್ದಾರೆ.
“ಹೇಮಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾದ ಆರೋಪಗಳ ತನಿಖೆಗೆ ನಿಯೋಜಿಸಲಾದ ರಾಜ್ಯ ಪೊಲೀಸ್ ತಂಡಕ್ಕೆ ನಾನು ದೂರು ನೀಡುತ್ತೇನೆ” ಎಂದು ಮಿನು ಮುನೀರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
2009ರಲ್ಲಿ ತೆರೆಗೆ ಬಂದ ‘ಕ್ಯಾಲೆಂಡರ್’ ಮತ್ತು 2011ರಲ್ಲಿ ತೆರೆಕಂಡ ‘ನಾಡಗಮೆ ಉಲಗಂ’ ಚಿತ್ರಗಳ ಚಿತ್ರೀಕರಣದ ಸಮಯದಲ್ಲಿ ಹೋಟೆಲ್‌ನಲ್ಲಿ ನಟರೊಬ್ಬರು ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂದು ಮಿನು ದೂರಿದ್ದಾರೆ.
“ಆತ (ನಟ) ನನ್ನ ಕೊಠಡಿಗೆ ಬಂದು ನನ್ನನ್ನು ಎಳೆದು ಬೆಡ್ ಮೇಲೆ ಹಾಕಿದರು. ಬಳಿಕ ಉತ್ತಮ ಅವಕಾಶಕ್ಕಾಗಿ ನಾನು ಪರಿಗಣಿಸಬೇಕಾದವರನ್ನು ಪರಿಗಣಿಸಬೇಕು ಎಂದು ಹೇಳಿದರು. ಬಳಿಕ ನಾನು ಅಲ್ಲಿಂದ ಹೊರಟೆ..ಅದಕ್ಕೂ ಮುನ್ನ ಕಾರಿನಲ್ಲಿ ಹೋಗುತ್ತಿದ್ದಾಗ ಮತ್ತೊಬ್ಬ ನಟ ರಾತ್ರಿ ನನ್ನ ಕೋಣೆಗೆ ಬರುವುದಾಗಿ ಹೇಳಿದ್ದರು. ಮರುದಿನ ರಾತ್ರಿ ಅವರು ಬಂದು ನನ್ನ ಕೋಣೆಯ ಬಾಗಿಲು ತಟ್ಟಿದ್ದರು” ಮಿನು ಹೇಳಿದ್ದಾರೆ.
2008ರಲ್ಲಿ ಇನ್ನೋರ್ವ ನಟ ದುರ್ವರ್ತನೆ ತೋರಿರುವುದಾಗಿ ಮಿನು ವಿವರಿಸಿದ್ದಾರೆ.
“ರಾಜ್ಯ ರಾಜಧಾನಿಯಲ್ಲಿ ಚಿತ್ರೀಕರಣದ ಸಮಯದಲ್ಲಿ, ನಾನು ವಿಶ್ರಾಂತಿ ಕೊಠಡಿಯಿಂದ ಹಿಂತಿರುಗುತ್ತಿದ್ದಾಗ, ನಟರೊಬ್ಬರು ನನ್ನನ್ನು ಹಿಂದಿನಿಂದ ತಬ್ಬಿ ಹಿಡಿದು ಮುತ್ತಿಕ್ಕಿದರು. ನಾನು ಅವರನ್ನು ತಳ್ಳಿ ಓಡಿಹೋದೆ. ನನ್ನನ್ನು ಅವರ ಫ್ಲಾಟ್‌ಗೆ ಆಹ್ವಾನಿಸಿದ್ದರು. ನಾನು ಆ ಆಹ್ವಾನವನ್ನು ತಿರಸ್ಕರಿಸಿದ ನಂತರ, ಅವರ ಕಡೆಯಿಂದ ಯಾವುದೇ ಸಮಸ್ಯೆ ಇರಲಿಲ್ಲ” ಎಂದು ಮಿನು ಹೇಳಿಕೊಂಡಿದ್ದಾರೆ.
“2013ರಲ್ಲಿ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ನಾನು ಮುಂದಾಗಿದ್ದೆ. ಆಗ ಅರ್ಜಿ ನಮೂನೆ ಭರ್ತಿ ಮಾಡುವ ಬಗ್ಗೆ ತಿಳಿಯಲು ನಾನು ನಟರೊಬ್ಬರಿಗೆ ಫೋನ್ ಕರೆ ಮಾಡಿದಾಗ, ಅವರು ನನ್ನನ್ನು ತಮ್ಮ ಫ್ಲಾಟ್‌ಗೆ ಆಹ್ವಾನಿಸಿದ್ದರು. ನಾನು ಅವರ ಫ್ಲಾಟ್‌ನಲ್ಲಿ ಅರ್ಜಿ ನಮೂನೆ ತುಂಬುತ್ತಿದ್ದಾಗ ಅವರು ಹಿಂದಿನಿಂದ ನನ್ನ ಕತ್ತಿಗೆ ಮುತ್ತಿಟ್ಟರು. ನಾನು ಫ್ಲಾಟ್‌ನಿಂದ ಹೊರಗೆ ಓಡಿದೆ. ನನಗೆ ಇದುವರೆಗೆ ಸದಸ್ಯತ್ವ ಸಿಕ್ಕಿಲ್ಲ” ವಿವರಿಸಿದ್ದಾರೆ.
“ಈ ರೀತಿಯ ‘ಅನುಭವಗಳಿಂದ’ ನಾನು ಮಲಯಾಳಂ ಚಲನಚಿತ್ರೋದ್ಯಮ ತೊರೆದು ಚೆನ್ನೈಗೆ ಸ್ಥಳಾಂತರಗೊಳ್ಳುವಂತೆ ಆಯಿತು” ಎಂದು ಮಿನು ಮುನೀರ್ ತಿಳಿಸಿದ್ದಾರೆ.