ರಾಜಕೀಯ

ಸಿಎಂ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

Views: 57

ಮೈಸೂರು,: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ತವರು ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಇಂದು ಮೈಸೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೂಡಲೇ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ನಾಯಕರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಗಾಳಿ ತೂರಿದ್ದಾರೆ ಎಂದು ಆರೋಪಿಸಿದರು.

ರಾಜ್ಯಪಾಲರು ತಮ್ಮ ಹುದ್ದೆಯ ಘನತೆ ಮತ್ತು ಸಂವಿಧಾನದ ಆಶಯಗಳನ್ನು ಕೊಂದು ಹಾಕಿದ್ದಾರೆ. ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸಿದ್ದಾರೆ.

ಮುಡಾ ವಿಚಾರದಲ್ಲಿ ಯಾವುದೇ ತಿರುಳು ಇಲ್ಲದಿರುವುದು ರಾಜ್ಯಪಾಲರಿಗೆ ಗೊತ್ತಿದೆ. ಆದರೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ರಾಜ್ಯದ ಸಮಸ್ತ ಜನರಿಗೆ ದ್ರೋಹ ಬಗೆದಿದ್ದಾರೆ ಎಂದರು.

ಬಿಜೆಪಿ ಮುಖಂಡರಾದ ಶಶಿಕಲಾ ಜೊತೆ ಮುರೆಗೇಶ್ ನಿರಾಣಿ ಅವರು ಭ್ರಷ್ಟಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಸಾಕ್ಷಿಗಳ ಸಮೇತ ಲೋಕಾಯುಕ್ತರು ಅನುಮತಿ ಕೇಳಿದಿದ್ದರೂ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ.

ಅದೇ ರೀತಿ ಶಾಸಕ ಜನಾರ್ಧನ್ ರೆಡ್ಡಿಯವರ ಅಕ್ರಮ ಆಸ್ತಿ ಬಗ್ಗೆ ತನಿಖೆ ಮಾಡಿ ಅವರು ಅಕ್ರಮ ಎಸಗಿರುವುದು ಸಾಬೀತಾಗಿದೆ. ಆದರೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಾರೆ. ಆದರೂ ಈ ಪ್ರಕರಣವನ್ನು ಪ್ರಾಸಿಕ್ಯೂಷನ್ ಗೆ ಕೊಟ್ಟಿಲ್ಲ ಎಂದು ಟೀಕಿಸಿದರು.

ಪ್ರತಿಭಟನೆ ನಂತರ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ರಾಜ್ಯಪಾಲರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಮುಖಂಡರು ಇಂದು ಕರೆ ನೀಡಿದ್ದ ಟಿ ನರಸಿಪುರ ಬಂದ್ ಬಹುತೇಕ ಯಶಸ್ವಿಯಾಯಿತು.ಅಂಗಡಿ ಮುಂಗಟ್ಟುಗಳನ್ನು ಮತ್ತು ಖಾಸಗಿ ಕಚೇರಿಗಳನ್ನು ಮುಚ್ಚಲಾಗಿತ್ತು, ಬೆರಳೆಣಿಕೆಯಷ್ಟು ವಾಹನ ಸಂಚಾರವಿದ್ದುದು ಕಂಡು ಬಂದಿತು.

ಇದೇ ವೇಳೆ ಬನ್ನೂರಿನಲ್ಲೂ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ನಡೆಯನ್ನು ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಪ್ರತಿಭಟನೆ ನಡೆಸಿದರು.

Related Articles

Back to top button
error: Content is protected !!