ಬಸ್ರೂರು: ಪತ್ನಿಯನ್ನು ಕತ್ತಿಯಿಂದ ಕಡಿಯಲು ಯತ್ನಿಸಿದ ಪತಿಯನ್ನು ಹರಸಾಹಸದಿಂದ ಬಂಧಿಸಿದ ಪೊಲೀಸರು.!

Views: 735
ಕುಂದಾಪುರ: ಗಂಡ ಹೆಂಡತಿಯ ಜಗಳ ವಿಕೋಪಕ್ಕೆ ಹೋಗಿ ಪತ್ನಿಯನ್ನು ಕತ್ತಿಯಿಂದ ಕಡಿಯಲು ಒಂದು ತಾಸಿಗೂ ಹೆಚ್ಚು ಕಾಲ ಬೆದರಿಸುತ್ತಿದ್ದ ಪತಿಯನ್ನು ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಸಹಕಾರದೊಂದಿಗೆ ಪೊಲೀಸರ ಹರಸಾಹಸದ ಕಾರ್ಯಾಚರಣೆಯೊಂದಿಗೆ ಪತ್ನಿಯನ್ನು ರಕ್ಷಿಸಿ, ಆರೋಪಿ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಬಸ್ರೂರಿನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿ ಮಧ್ಯೆ ಗಲಾಟೆ ಆರಂಭಗೊಂಡು ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಆರೋಪಿಯು ಬಳಿಕ ಮನೆಯ ಒಳಗಿನಿಂದ ಬಾಗಿಲು ಭದ್ರಪಡಿಸಿ ಯಾರೂ ಒಳಗೆ ಬಾರದಂತೆ ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಕತ್ತಿ ಹಿಡಿದು ಹೆದರಿಸಿದ್ದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬಂದಿ ಭಾರೀ ಪ್ರಯಾಸಪಟ್ಟು ಕೋಣೆಯ ಕಿಟಿಕಿಯನ್ನು ಮುರಿದು ಒಳಗೆ ಪ್ರವೇಶಿಸಿ ಗಾಯ ಗೊಂಡಿದ್ದ ಅನಿತಾ (32) ಅವರನ್ನು ರಕ್ಷಿಸಿ ಕುಂದಾಪುರದ ಆಸ್ಪತ್ರೆಗೆ ಸೇರಿಸಲಾಯಿತು, ಆರೋಪಿ ಲಕ್ಷ್ಮಣ (38) ನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಗರ ಮೂಲದ ಈ ದಂಪತಿಗಳು, ಬಸ್ರೂರಿನ ವೃದ್ಧಾಶ್ರಮವೊಂದರ ತೋಟದಲ್ಲಿ ಕೆಲಸಕ್ಕೆಂದು ಬಂದಿದ್ದರು. ಅಲ್ಲಿನ ಕ್ವಾಟ್ರಸ್ನ ಒಂದು ರೂಮಿನಲ್ಲಿ ವಾಸ್ತವ್ಯದಲ್ಲಿದ್ದರು. ಕೈಯಲ್ಲಿ ಕತ್ತಿ ಹಿಡಿದು ಪತ್ನಿಗೆ ಹೆದರಿಸುತ್ತಿದ್ದುದರಿಂದ ಎದುರಿನ ಬಾಗಿಲು ಮುರಿದು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಪೊಲೀಸರು ಆತನಿದ್ದ ರೂಮಿನ ಕಿಟಕಿ ಮೂಲಕ ಖಾರದ ಪುಡಿ ಎರಚಲಾಯಿತು. ಅದರಿಂದ ಆತ ತಪ್ಪಿಸಿಕೊಂಡ ಕೂಡಲೇ ಏರ್ಗನ್ ಮೂಲಕ ಗ್ಯಾಸ್ ಸಿಂಪಡಿಸಿದರೂ ತಪ್ಪಿಸಿಕೊಂಡಿದ್ದಾನೆ.ರಕ್ಷಣಾ ತಂಡ ಕಿಟಕಿ ಮೂಲಕ ಒಳಗೆ ಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದರು.ಆ ಬಳಿಕ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ಸಹಕಾರದಿಂದ ಮಹಿಳೆಯನ್ನು ರಕ್ಷಿಸಲಾಯಿತು.ವೃತ್ತ ನಿರೀಕ್ಷಕ ಜಯರಾಮ್ ಗೌಡ, ಕಂಡ್ಲೂರು ಎಸ್ಐ ಭೀಮಾಶಂಕರ ಕಾರ್ಯಾಚರಣೆಯಲ್ಲಿದ್ದರು.






