ಆನಂದಮಾರ್ಗ ಆಶ್ರಮದಲ್ಲಿ ಹೊಡೆದಾಟ: ಚಿನ್ಮಯಾನಂದ ಸ್ವಾಮೀಜಿ ಹತ್ಯೆ

Views: 127
ಕೋಲಾರ: ಮಾಲೂರು ತಾಲ್ಲೂಕಿನ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಸ್ವಾಮೀಜಿಯೊಬ್ಬರನ್ನು ಕೊಲೆ ಮಾಡಲಾಗಿದೆ.
ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ (70) ಹತ್ಯೆಯಾದವರು. ಆಚಾರ್ಯ ಧರ್ಮ ಪ್ರಾಣಾನಂದ, ಪ್ರಾಣೇಶ್ವರಾನಂದ ಹಾಗೂ ಅರುಣ್ ಕುಮಾರ್ ಎಂಬುವರನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಚಾರ್ಯ ಧರ್ಮ ಪ್ರಾಣಾನಂದ ಗುಂಪಿನಿಂದ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ಬೆಳಿಗ್ಗೆ ಆರು ಗಂಟೆಗೆ ಸ್ವಾಮೀಜಿ ಮೇಲೆ ಹಲ್ಲೆ ನಡೆದಿದೆ. ಆಶ್ರಮದಲ್ಲಿ ಸ್ನಾನ ಮಾಡುತ್ತಿದ್ದ ಅವರನ್ನು ಹೊರಗೆ ಎಳೆದುಕೊಂಡು ಬಂದ ಆರೋಪಿಗಳು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ಸ್ಥಳದಲ್ಲಿದ್ದವರು ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಸ್ವಾಮೀಜಿ ಮೃತಪಟ್ಟರು.
ಆಶ್ರಮ ಹಾಗೂ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಠಕ್ಕೆ ಸೇರಿದ ಪಾಲಿಟೆಕ್ನಿಕಲ್ ಕಾಲೇಜು ಸಂಬಂಧ ಎರಡು ಗುಂಪುಗಳ ನಡುವೆ 22 ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು ಇದೇ ಕಾರಣದಿಂದ ಕೊಲೆ ನಡೆದಿದೆ.






