ಗೋತ್ರಗಳ ಹಿಂದಿರುವ ವೈಜ್ಞಾನಿಕ ಮಹತ್ವ, ನಿಮದ್ಯಾವ ಗೋತ್ರ..?

Views: 208
ಹಿಂದೂ ಧರ್ಮದ ವಿವಾಹಗಳಲ್ಲಿನ ಪ್ರತಿಯೊಂದು ಪದ್ಧತಿಯು ಅದರದ್ದೇ ಆದ ಅರ್ಥವನ್ನು, ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಮದುವೆಗೂ ಮುನ್ನ ಹುಡುಗ ಮತ್ತು ಹುಡುಗಿಯ ಗೋತ್ರವನ್ನು ನೋಡಿ ವಿವಾಹವನ್ನು ನಿಶ್ಚಯಿಸಲಾಗುತ್ತದೆ. ಒಂದೇ ಗೋತ್ರದ ಹುಡುಗ ಮತ್ತು ಹುಡುಗಿಗೆ ಯಾಕೆ ಮದುವೆ ಮಾಡುವುದಿಲ್ಲ ಗೊತ್ತೇ..? ಒಂದೇ ಗೋತ್ರದಲ್ಲಿ ಮದುವೆ ಮಾಡಿದರೆ ಏನಾಗುವುದು..?
ಹಿಂದೂ ಧರ್ಮದಲ್ಲಿ ವಿವಾಹ ಕಾರ್ಯಗಳಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಅದರಂತೆಯೇ ಗೋತ್ರಗಳಿಗೂ ಹೆಚ್ಚಿನ ಮಹತ್ವವಿದೆ. ಹಿಂದೂ ಸಂಪ್ರದಾಯದಂತೆ ವಿವಾಹ ಪೂಜೆಯಿಂದ ಹಿಡಿದು, ಮದುವೆಯಲ್ಲಿ ಪಠಿಸುವ ಮಂತ್ರ ಮತ್ತು ಗೋತ್ರದವರೆಗೂ ಅದರದ್ದೇ ಆದ ನಿಯಮಗಳಿವೆ. ಹಿಂದೂ ವಿವಾಹಗಳಲ್ಲಿ ಗೋತ್ರವನ್ನು ತಿಳಿಯದೆ ವಿವಾಹ ವಿಧಿಗಳನ್ನು ನಡೆಸಲಾಗುವುದಿಲ್ಲ. ವಿವಾಹವಾಗುವ ಹುಡುಗ ಮತ್ತು ಹುಡುಗಿಯರು ಒಂದೇ ಗೋತ್ರಕ್ಕೆ ಸೇರಿದವರಾಗಿದ್ದರೆ, ಅವರ ಮದುವೆಗಳು ನಡೆಯುವುದಿಲ್ಲ, ಅದಕ್ಕಾಗಿಯೇ ಅವರು ಮದುವೆಗೆ ಮುಂಚೆಯೇ ಪರಸ್ಪರರ ಗೋತ್ರವನ್ನು ತಿಳಿದುಕೊಳ್ಳುತ್ತಾರೆ. ಹುಡುಗ-ಹುಡುಗಿಯರ ಗೋತ್ರಗಳು ಬೇರೆ ಬೇರೆಯಾದಾಗ ಮಾತ್ರ ಮದುವೆಗೆ ಜಾತಕ ಕೂಡಿಬರುತ್ತದೆ ಎನ್ನುವ ನಂಬಿಕೆಯಿದೆ. ಹಿಂದೂ ಧರ್ಮದಲ್ಲಿ ಮದುವೆಗಳು ಒಂದೇ ಗೋತ್ರದಲ್ಲಿ ಏಕೆ ನಡೆಯುವುದಿಲ್ಲ ಮತ್ತು ಗೋತ್ರ ಏಕೆ ಮಹತ್ವದ್ದಾಗಿದೆ ಎಂಬುದನ್ನು ನಾವಿಂದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ

ಗೋತ್ರಗಳು ಸಪ್ತಋಷಿಗಳ ವಂಶಸ್ಥರ ರೂಪದಲ್ಲಿವೆ. ಗೌತಮ, ಕಶ್ಯಪ, ವಸಿಷ್ಠ, ಭಾರದ್ವಜ, ಅತ್ರಿ, ಅಂಗಿರಸ, ಮೃಗು ಈ 7 ಋಷಿಗಳನ್ನು ಸಪ್ತಋಷಿಗಳೆಂದು ಪರಿಗಣಿಸಲಾಗುತ್ತದೆ. ವೇದಗಳ ಕಾಲದಿಂದಲೇ ಗೋತ್ರಗಳ ಪ್ರಾಮುಖ್ಯತೆ ಆರಂಭವಾಯಿತು ಎಂದು ಹೇಳಲಾಗುತ್ತದೆ. ವಾಸ್ತವವಾಗಿ ರಕ್ತ ಸಂಬಂಧಿಗಳ ನಡುವಿನ ವಿವಾಹವನ್ನು ತಪ್ಪಿಸಲು ಇದನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಇದರೊಂದಿಗೆ ಒಂದೇ ಗೋತ್ರದ ಹುಡುಗರು ಮತ್ತು ಹುಡುಗಿಯರು ಮದುವೆಯಾಗಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ಸಹ ಮಾಡಲಾಗಿದೆ.
ಭಾರತದಲ್ಲಿ ಅನೇಕ ಸಮುದಾಯಗಳಲ್ಲಿ ಗೋತ್ರ ಪದ್ಧತಿ ಇದೆ. ಗೋತ್ರ ಪದ್ಧತಿ ಅನುಸರಿಸುವ ಈ ಸಮುದಾಯಗಳ ಜನರ ಹತ್ತಿರ ಗೋತ್ರ ಅಂದರೇನು ? ಎಂದು ಕೇಳಿದರೆ ಸಮರ್ಪಕ ಉತ್ತರ ದೊರೆಯುವುದಿಲ್ಲ. ಬಹಳಷ್ಟು ಹಿರಿಯರಿಗೇ ಗೊತ್ತಿಲ್ಲ ಎಂದ ಮೇಲೆ ಇನ್ನು ಕಿರಿಯರಿಗೆ ಹೇಗೆ ಗೊತ್ತಿರಬೇಕು?
ಒಬ್ಬ ವ್ಯಕ್ತಿಯು ಸಾತ್ವಿಕ ಆಹಾರ, ಸಾತ್ವಿಕ ಚಿಂತನೆ, ಸಾತ್ವಿಕ ನಡವಳಿಕೆ ಮುಂತಾದವುಗಳ ಮೂಲಕ ದೀರ್ಘ ಕಾಲ ತಪಸ್ಸು (ದೇಹ-ಮನಸ್ಸು-ಬುದ್ಧಿಗಳ ಶುದ್ಧೀಕರಣ) ಮಾಡಿದರೆ ಆತ ಋಷಿ ಎನಿಸಿಕೊಳ್ಳುತ್ತಾನೆ. ತಪಸ್ಸು ಕಠಿಣವಾಗುತ್ತ, ದೀರ್ಘವಾಗುತ್ತ ಹೋದಹಾಗೆ ಆತ ಔನ್ನತ್ಯದ ವಿವಿಧ ಮಜಲುಗಳನ್ನು ತಲುಪುತ್ತಾ ಹೋಗುತ್ತಾನೆ.
ಋಷಿ, ರಾಜರ್ಷಿ, ಮಹರ್ಷಿ ಇತ್ಯಾದಿ ಹಂತಗಳನ್ನು ದಾಟುತ್ತಾನೆ. ಈ ರೀತಿ ಕಠೋರ ತಪಸ್ಸಿನ ಕೊಟ್ಟಕೊನೆಯ ಹಂತ ಎಂದರೆ ಬ್ರಹ್ಮರ್ಷಿತ್ವ. ಯಾರು ಬ್ರಹ್ಮರ್ಷಿ ಪದವಿಯನ್ನು ಗಳಿಸಿಕೊಳ್ಳುತ್ತಾನೋ, ಆತ ಶುದ್ಧೀಕರಣ ಪ್ರಕ್ರಿಯೆಯ ಕೊನೆಯ ಸ್ಥಿತಿತಲುಪಿದ್ದಾನೆ, ಇನ್ನು ಶುದ್ಧಗೊಳ್ಳಲು ಏನೂ ಉಳಿದಿಲ್ಲ ಎಂದರ್ಥ.
ಋಷಿಗಳೆಂದರೆ ಸಂನ್ಯಾಸಿಗಳಲ್ಲ. ಅವರು ಸಾಮಾನ್ಯವಾಗಿ ಗೃಹಸ್ಥರೇ ಆಗಿರುತ್ತಾರೆ. ಇಂಥ ಬ್ರಹ್ಮರ್ಷಿಯ ಮಗನೂ ಬ್ರಹ್ಮರ್ಷಿಯಾದರೆ, ಆ ಮಗನ ಮಗನೂ ಬ್ರಹ್ಮರ್ಷಿಯಾದರೆ, ಈ ರೀತಿ ಒಬ್ಬರ ಬಳಿಕ ಒಬ್ಬರಂತೆ ಆ ಕುಟುಂಬದಲ್ಲಿ ಏಳು ತಲೆಮಾರುಗಳ ತನಕ ಬ್ರಹ್ಮರ್ಷಿಗಳಾದರೆ ಮೊದಲನೆಯ ಬ್ರಹ್ಮರ್ಷಿಯ ಹೆಸರಿನಲ್ಲಿ ಗೋತ್ರ ನಿರ್ಮಾಣವಾಗುತ್ತದೆ. ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ, ಆಂಗೀರಸ, ಕಶ್ಯಪ, ಗೌತಮ, ಭಾರದ್ವಾಜ ಮುಂತಾದವರು ಗೋತ್ರ ಪ್ರವರ್ತಕರೆಂದು ಪ್ರಸಿದ್ಧರಾಗಿದ್ದಾರೆ.
ಇಲ್ಲಿ ಇನ್ನೊಂದು ಸೂಕ್ಷ್ಮವೂ ಕುತೂಹಲಕಾರಿಯೂ ಆಗಿರುವ ಸಂಗತಿಯೊಂದಿದೆ. ಒಬ್ಬರ ಬಳಿಕ ಒಬ್ಬರಂತೆ ಏಳು ಜನ ಬ್ರಹ್ಮರ್ಷಿಗಳಾದುದರಿಂದ ಆ ವಂಶವೇ ಶುದ್ದತೆಯ ಪರಿಪೂರ್ಣತೆಯನ್ನು ತಲುಪಿದೆ ಎಂದರ್ಥ. ಆ ಗೋತ್ರದಲ್ಲಿ ಹುಟ್ಟಿದವರೆಲ್ಲ ತಮ್ಮ ವಂಶವಾಹಿನಿಗಳಲ್ಲಿ ತಮ್ಮ ಪೂರ್ವಜರ ಶುದ್ಧತೆಯನ್ನು ಪಡೆದುಕೊಂಡು ಬಂದಿದ್ದಾರೆಂದು ನಮ್ಮ ಪರಂಪರೆ ಭಾವಿಸುತ್ತದೆ. ಆಧುನಿಕ ವೈದ್ಯವಿಜ್ನಾನ ಕೂಡ ಡಿ.ಎನ್.ಎ. ಹೆಸರಿನ ವರ್ಣತಂತುಗಳು ವ್ಯಕ್ತಿಯ ಪೂರ್ವಜರ ಗುಣವಿಶೇಷಗಳನ್ನು ಹೊತ್ತುತಂದಿರುತ್ತವೆ ಎಂಬ ಸಂಗತಿಯನ್ನು ಪ್ರತಿಪಾದಿಸುತ್ತದೆ. ಅಲ್ಲಿಗೆ ಅದು ಗೋತ್ರತತ್ವ ಏನು ಹೇಳುತ್ತದೆಯೋ ಅದನ್ನೇ ಹೇಳಿದಂತಾಯಿತು.
ಗೋತ್ರ ಎಂದರೇನು?ಗೋತ್ರ ಪದ್ಧತಿ ನಮ್ಮಲ್ಲಿ ಯಾಕೆ ಇದೆ?
ನಮ್ಮಲ್ಲಿ ಎಷ್ಟೋ ಜನರಲ್ಲಿ ಇರುವ ಗೊಂದಲ ಅಂದರೆ: ಗೋತ್ರ ಎಂದರೇನು?ಗೋತ್ರ ಪದ್ಧತಿ ನಮ್ಮಲ್ಲಿ ಯಾಕೆ ಇದೆ? ಯಾಕೆ ನಾವು ವಿವಾಹ ಮಾಡುವ ಮೊದಲು ಕಡ್ಡಾಯವಾಗಿ ಗೋತ್ರ ನೋಡುತ್ತೇವೆ?
ಏಕೆ ಮಗ ಮಾತ್ರ ತಂದೆಯ ಗೋತ್ರವನ್ನು ಮುಂದುವರೆಸುತ್ತಾನೆ ?ಮಗಳಲ್ಲ?
ಹೇಗೆ ಮಗಳ ಗೋತ್ರವು ಮದುವೆಯ ಬಳಿಕ ಬದಲಾಗುತ್ತದೆ?
ಪ್ರಥಮತವಾಗಿ “ಗೋತ್ರ” ಎಂಬ ಶಬ್ಧವು ಸಂಸ್ಕೃತದ ಎರಡು ಅಕ್ಷರಗಳಿಂದ ಉಂಟಾಗಿದ್ದು ‘ಗೋ’ ಅಂದರೆ ಹಸು, ‘ತ್ರಾಹಿ’ ಅಂದರೆ ಕೊಟ್ಟಿಗೆ ಎಂದರ್ಥ. ಗೋತ್ರವು ‘ಹಸುವಿನ ಕೊಟ್ಟಿಗೆ’ ಎಂದಾಗಿದ್ದು, ಪುರುಷ ತಳಿಯ ವಾಹಕವಾಗಿದೆ.
ಗೋತ್ರಃ = ಗತಿಃ ಯತಃ ರಾಯತೇ ಎಂದರೆ: (ಮನುಷ್ಯ/ಬ್ರಾಹ್ಮಣ ಸಂತತಿಯ) ಪಯಣವು ಎಲ್ಲಿಂದ ಆರಂಭಿಸುತ್ತದೆಯೋ ಅದು ಎಂದರ್ಥ. ಹಾಗಾದರೆ ನಾವೆಲ್ಲರೂ ನಮ್ಮ ಮೂಲಪುರುಷ ಯಾವುದೋ ಋಷಿ ಅಥವಾ ಅಷ್ಟಋಷಿಗಳಲ್ಲೊಬ್ಬರ ಅನುಯಾಯಿ ಆಗಿದ್ದು, ನಮ್ಮ ಗೋತ್ರವು ಆ ಮೂಲ ಪುರುಷ ಋಷಿಯ ಹೆಸರಿನಿಂದ ಗುರುತಿಸಿ ಕೊಳ್ಳುವೆವು. (ಸಪ್ತ ಋಷಿಗಳು: ವಸಿಷ್ಠ, ವಿಶ್ವಾಮಿತ್ರ, ಅತ್ರಿ, ಆಂಗೀರಸ, ಜಮದಗ್ನಿ, ಕಶ್ಯಪ, ಗೌತಮ ಮತ್ತು ಭಾರಧ್ವಾಜ)
ತಂದೆ ಹಾಗೂ ತಾಯಿಯಿಂದ ಉತ್ಪತ್ತಿಯಾದ ಸಪ್ತಧಾತುಗಳು ಸೇರಿ, ತಾಯಿ ಗರ್ಭದಲ್ಲಿ ಸಮಪಿಂಡವಾಗಿ ಇಬ್ಬರ ಅಂಶದಿಂದ ಬಂದ ಪ್ರಾಣ, ಪ್ರಜ್ಞೆ, ಆತ್ಮಾಂಶಗಳು ಸಂಯುಕ್ತವಾಗಿ ತಂದೆಯ ಇಪ್ಪತ್ತ ಮೂರು, ತಾಯಿಯ ಇಪ್ಪತ್ತಮೂರು ವರ್ಣತಂತುಗಳ ಕೂಡುವಿಕೆಯಿಂದ ಒಂದೇ ಒಂದು ಮೂಲ ಜೀವಕೋಶ ರಚನೆಯಾಗಿ ಅದೇ ಕೋಶ ವಿಭಜನೆಗೊಂಡು ಪ್ರತಿ ಶಿಶುವು ಜನ್ಮ ತಾಳುವುದು.

ಗೋತ್ರ ದ ಹಿಂದೆ ವೈಜ್ಞಾನಿಕ ವಿಶ್ಲೇಷಣೆ
ತಂದೆಯ ಇಪ್ಪತ್ತ ಮೂರು ‘XY’ ತಾಯಿಯ ಇಪ್ಪತ್ತ ಮೂರು ‘XX’ ವರ್ಣತಂತುಗಳ ಗುಣಾಂಶ ಹಾಗೂ ವಂಶವಾಹಿನಿಯಾಗಿ ಬರುತ್ತದೆ. ಮಗುವಿಗೆ ತಾಯಿಯ ಗುಣಾಂಶ ‘X’ ಸಾಮಾನ್ಯವಾಗಿದ್ದು, ತಂದೆಯ ‘Y’ ಗುಣಾಂಶವು ತಾಯಿಯ ‘XX’ ಗುಣಾಂಶವನ್ನು ಮೀರಿ ತಂದೆಯಿಂದ ‘Y’ ಬರುವುದರಿಂದ ಮಗಳಿಗೆ ತಂದೆಯ ‘Y’ ಬರಲು ಅಸಾಧ್ಯವಾಗಿದ್ದು, ತಂದೆಯಿಂದ ಗೋತ್ರವು ಮಗನಿಗೆ, ಮೊಮ್ಮಗನಿಗೆ, ಮರಿಮಗನಿಗೆ ಮಾತ್ರ ಮುಂದುವರಿಯುವುದು. ಮೇಲೆ ಹೆಸರಿಸಿದ ಎಂಟು ಋಷಿಗಳಲ್ಲಿ ಎಂಟು ವಿಭಿನ್ನ ‘Y’ ಗುಣಾಂಶದ ವರ್ಣತಂತುಗಳಿದ್ದು, ಆ ತಳಿಮೂಲಾಂಶದ ವಂಶವಾಹಿನಿ ನಾವಾಗಿದ್ದೇವೆ ಹಾಗೂ ನಾವು ಯಾವ ಮೂಲ ಪುರುಷನ ಸಂತತಿ ಎಂಬುದು ತಿಳಿಯುತ್ತದೆ.
ವಿವಾಹ ವಿಚಾರದಲ್ಲಿ ನಾವು ಸ್ವಗೋತ್ರರಲ್ಲಿ ನೆಂಟಸ್ತಿಕೆ ಮಾಡಿದಲ್ಲಿ ‘Y’ ಗುಣಾಂಶದ ವರ್ಣತಂತುಗಳು ಭವಿಷ್ಯದಲ್ಲಿ ಮುಂದುವರೆಯಲಾಗದೆ ನಿಃಶಕ್ತ, ನಿತ್ರಾಣ, ಬೆಳವಣಿಗೆ ಕುಂಠಿತ, ರಕ್ತ ಸಂಬಂಧಿ ಕಾಯಿಲೆ, ಪುತ್ರವಿಹೀನ, ಸಂತಾನ ಹೀನ- ಇತ್ಯಾದಿ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ಹಾಗಾಗಿ ಗೋತ್ರವು ‘Y’ ಗುಣಾಂಶದ ವರ್ಣತಂತುಗಳ ರಕ್ಷಕನಾಗಿದೆ.
ಗೋತ್ರ ಪ್ರವರ ಹೇಳುತ್ತೇವೆಯೇ ಹೊರತು, ಅದು ಏನು? ಅದರ ಅರ್ಥವೇನು? ಇತ್ಯಾದಿ ತಿಳಿಯದು.
ಲೋಕದಲ್ಲಿನ ಜನರು ತಾವು ಯಾರು? ಎಲ್ಲಿಂದ ಬಂದೆವು? ಯಾವ ಬುಡಕಟ್ಟಿಗೆ ಸೇರಿದವರು? ನಮ್ಮ ವಂಶದ ಪೂರ್ವಜರ ಚರಿತ್ರೆಯೇನು? ಇತ್ಯಾದಿ ವಿಷಯಗಳನ್ನು ತಿಳಿಯಲು ಉತ್ಸುಕರಾಗಿರುತ್ತಾರೆ. ಆಸೆ ಪಡುತ್ತಾರೆ. ಗೋತ್ರ ಎಂದರೆ, ತಾನು ಹುಟ್ಟಿದ ವಂಶದ ಮೂಲಪುರುಷನ ಹೆಸರು. ಯಾವ ಋಷಿಯ ವಂಶದಲ್ಲಿ ಹುಟ್ಟಿದನೋ ಅವನ ಹೆಸರು. ಅದನ್ನೇ ಮನೆತನ, ವಂಶ ಎಂದು ಕರೆಯುವುದು. ಪ್ರವರ ಎಂದರೆ, ಆಯಾ ವಂಶದಲ್ಲಿ ಬಂದ ಪ್ರಸಿದ್ಧರಾದ ನಮ್ಮ ತಾತ ಮುತ್ತಾತಂದಿರ ಹೆಸರು. ನಾವು ಬಂದ ವಂಶದಲ್ಲಿ ಪ್ರಸಿದ್ಧರಾದವರು ಅದು ಮುತ್ತಾತ, ತಾತ, ತಂದೆಯಾಗಿರಬಹುದು. ಅಥವಾ ಮುತ್ತಾತ, ಅವರಿಂದ ಕೆಲವು ತಲೆಮಾರುಗಳು ಬಿಟ್ಟು, ಇನ್ನೊಬ್ಬ ಪ್ರಸಿದ್ಧರಾದವರ ಹೆಸರು, ಅವರಿಂದ ಮೇಲೆ ಇನ್ನೂ ಕೆಲವು ತಲೆಮಾರುಗಳು ಬಿಟ್ಟು, ಬಂದವರ ಹೆಸರು. ಅವರು ಎಲ್ಲಾ ವಿಷಯಗಳಲ್ಲೂ ಪ್ರಸಿದ್ಧರಾಗಿರಬೇಕು. ಈ ರೀತಿ ಮೂರು ಜನರ ಹೆಸರು, ಅಥವಾ ಐದು ಜನರ ಹೆಸರುಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳುವುದು. ಇದು ಬದಲಾಗಬಹುದು. ಆಗದೆಯೂ ಇರಬಹುದು.

ನಮ್ಮ ವಂಶದ ಎಲ್ಲರ ಹೆಸರುಗಳನ್ನು ಹೇಳುವುದಕ್ಕಾಗುವುದಿಲ್ಲ. ಆದ್ದರಿಂದ, ಪ್ರಸಿದ್ಧರಾದ ಮೂರುಜನ, ಅಥವಾ ಐದುಜನರ ಅಥವಾ ಏಳುಜನರ ಹೆಸರನ್ನು ಹೇಳುವುದು. ಅವರು ಜ್ಞಾನವಂತರಾದ್ದರಿಂದ ಅವರನ್ನೇ ಋಷಿ ಎಂದು ಕರೆಯುವರು.
ತ್ರಿ+ಆರ್ಷೇಯ = *ತ್ರ್ಯಾರ್ಷೇಯ* , ಪಂಚ+ಆಷೇಯ= *ಪಂಚಾರ್ಷೇಯ* , ಸಪ್ತ+ಆರ್ಷೇಯ = *ಸಪ್ತಾರ್ಷೇಯ* ಶಬ್ದದಿಂದ ಕರೆಯುತ್ತೇವೆ. (ಇಲ್ಲಿ ಆರ್ಷೇಯ = ಆರ್ಷ ಪರಂಪರೆಗೆ ಸಂಬಂಧಿಸಿದ; ಆರ್ಷ=ವೇದ, ಋಷಿಬಣಿತ, ಋಷಿಯಿಂದ ಹೇಳಲ್ಪಟ್ಟ ಎಂದು ಅರ್ಥ.)
ಅನಂತರ ನಮ್ಮ ಕೂಟಸ್ಥರು ಮೂಲ ಪುರುಷ ಋಷಿಯ ಹೆಸರನ್ನು ಹೇಳುವುದು. ಅದಕ್ಕೆ ಗೋತ್ರ ಎಂದು ಹೆಸರು.
ಸೂತ್ರ ಎಂದರೆ
ವೇದ ಧರ್ಮ ತಿಳಿಯಲು, ಅದರಂತೆ ಆಚರಿಸಲು ಅನೇಕ ಸೂತ್ರಗಳು ಬರೆಯಲ್ಪಟ್ಟಿವೆ. ಅವುಗಳು:- ಆಪಸ್ತಂಭ, ಆಶ್ವಲಾಯನ, ದ್ರಾಹ್ಯಾಯಣ, ಇತ್ಯಾದಿ.. ಸೂತ್ರಗಳಿವೆ. ಇವುಗಳು ಇಂತಿವೆ:
ಆಪಸ್ತಂಭ ಸೂತ್ರವು ಯಜುರ್ವೇದಕ್ಕೆ ಸೇರಿರುವುದು.
ಆಶ್ವಲಾಯನ ಸೂತ್ರವು ಋಗ್ವೇದಕ್ಕೆ ಸೇರಿರುವುದು.
ದ್ರಾಹ್ಯಾಯಣ ಸೂತ್ರವು ಸಾಮವೇದಕ್ಕೆ ಸೇರಿರುವುದು.
ಗೋತ್ರವನ್ನು ಹೇಳಿದ ಮೇಲೆ ಇಂಥ ವೇದಕ್ಕೆ ಸೇರಿದ ಸೂತ್ರ ಎಂದರೆ – ಗೃಹ್ಯಸೂತ್ರದ ಪ್ರಕಾರ ಷೋಡಶಕರ್ಮಕ್ಕೆ ಒಳಪಟ್ಟವನು ಎಂದರ್ಥವು. ಅನಂತರ ವೇದ ಪರಂಪರೆಯಾಗಿ ಬಂದ ಇಂತಹ ವೇದ ವಿದ್ಯೆಯನ್ನು ಅಧಿಕರಿಸುವವನು ಎಂಬರ್ಥವು.
ತ್ರಿ-ಆರ್ಷೇಯ(ತ್ರ್ಯಾರ್ಷೇಯ) ಅಥವಾ ಪಂಚಾರ್ಷೇಯ ಅಥವಾ ಸಪ್ತಾರ್ಷೇಯ ಪ್ರವರಾನ್ವಿತ . . ಸೂತ್ರ. . . . ಶಾಖಾಧ್ಯಾಯೀ ಎಂದು ಹೇಳಿ, ಗುರುಹಿರಿಯರಿಗೆ ನಮಸ್ಕರಿಸುವುದು. ಅರ್ಥಾತ್ ನೀನು ಯಾರು? ಎಂದು ಕೇಳಿದರೆ, ಇಂತಹ ಋಷಿಗಳ ವಂಶದಲ್ಲಿ ಹುಟ್ಟಿ, ಇಂತಹ ಸೂತ್ರದ ಪ್ರಕಾರ ಷೋಡಶಕರ್ಮಗಳಿಗೆ ಒಳಪಟ್ಟು, ಇಂಥ ವೇದವನ್ನು ಅಧಿಕರಿಸುವವನು – ಎಂದು ಹೇಳುವುದು.
ನಮ್ಮ ಸಂಸ್ಕೃತಿಯು ಪ್ರತಿಯೊಬ್ಬನೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಂದರೆ ತ್ರಿಕಾಲದಲ್ಲೂ ನಮ್ಮ ಹಿರಿಯರನ್ನು ಎಂದರೆ, ನಾವು ಬಂದ ನಮ್ಮ ಋಷಿ ಪರಂಪರೆಯಲ್ಲಿ ಮೂರುಜನಗಳು ಅಥವಾ ಐದು ಜನಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳಿ, ಹಿರಿಯರಿಗೆ ಗುರುಗಳಿಗೆ ನಮಸ್ಕರಿಸಬೇಕೆಂದು ಹೇಳುವುದು. ಅದರಂತೆ ನಾವು ಸಂಧ್ಯಾವಂದನೆ, ದೇವತಾಪೂಜೆಯ ಕಾಲದಲ್ಲಿ ನಮ್ಮ ಹಿರಿಯರನ್ನು ನೆನೆಸಿಕೊಂಡು, ಗುರುಹಿರಿಯರಿಗೆ ನಮಸ್ಕರಿಸುತ್ತೇವೆ. ಅದನ್ನು ತೋರಿಸುವುದೇ ಈ ಗೋತ್ರ, ಪ್ರವರ, ಸೂತ್ರ ಎನ್ನುವುದು.
ಈ ಗೋತ್ರ,ಪ್ರವರ ವಿಷಯದಲ್ಲಿ ಅನೇಕ ಪಂಡಿತರು ವಿಮರ್ಶನಾತ್ಮಕ ಗ್ರಂಥಗಳನ್ನು ಬರೆದಿರುವರು. ಕಮಲಾಕರಭಟ್ಟ ಬರೆದ ಗ್ರಂಥವಿದೆ. “ಗೋತ್ರ, ಪ್ರವರ,ನಿರ್ಣಯ” ಎಂಬ ಗ್ರಂಥವೂ ಇರುವುದು. ಆ ಗ್ರಂಥಗಳನ್ನು ಓದಿ ತಿಳಿಯುವುದು ಕಷ್ಟ. ಪಂಡಿತರು, ತಿಳಿದವರು ಗೋತ್ರ, ಪ್ರವರ, ಸೂತ್ರ ವಿಚಾರವಾಗಿ ನಮ್ಮ ಮಕ್ಕಳಿಗೆ ಮನದಟ್ಟಾಗುವಂತೆ ವಿಮರ್ಶಾತ್ಮಕವಾಗಿ ಬರೆಯಬೇಕು.
ಗೋತ್ರ,ಋಷಿಗಳ ಆವಿರ್ಭಾವ:- ಚತುರ್ಮುಖ ಬ್ರಹ್ಮನಿಂದ ಪರಂಪರೆಯಾಗಿ ಏಳು ಮಂದಿ ಋಷಿ ಪುಂಗವರು ಜನಿಸಿದರು.
ಭೃಗು
ಆಂಗೀರಸ
ಮರೀಚಿ
ಅತ್ರಿ
ಪುಲಹ
ಪೌಲಸ್ತ್ಯ
ವಸಿಷ್ಠ
ಎಂಬುದಾಗಿ ಏಳುಮಂದಿ ಋಷಿಗಳು ಉದಯಿಸಿದರು. ಇವರಲ್ಲಿ ಐದನೆಯವರಾದ ಪುಲಹಋಷಿಯಿಂದ ರಾಕ್ಷಸರ ಉತ್ಪನ್ನವಾಯಿತು. ಆರನೆಯವರಾದ ಪೌಲಸ್ತ್ಯರಿಂದ ಪೈಶಾಚರು ಉತ್ಪನ್ನರಾದರು. ಏಳನೆಯವರಾದ ವಸಿಷ್ಠರು ಮೃತರಾಗಿ ಮೂರನೆಯವರಾದ ಮರೀಚಿಗೆ ಉತ್ತರಾಧಿಕಾರಿಯಾಗಿ ಏರ್ಪಟ್ಟರು. ಆದ್ದರಿಂದ ಈಗಿರುವ ಅಖಿಲಬ್ರಾಹ್ಮಣ ಸಮೂಹವೆಲ್ಲವೂ ಮೊದಲು ತಿಳಿಸಿದ
ಭೃಗು
ಆಂಗೀರಸ
ಮರೀಚಿ
ಅತ್ರಿ
ಈ ನಾಲ್ಕು ಋಷಿಗಳ ಪರಂಪರೆಗೆ ಸೇರಿದವರು.

ಈ ನಾಲ್ಕು ಋಷಿಗಳು ಸೇರಿ ಸಮುದಾಯ ಅಥವಾ ಮನೆತನ ಅಥವಾ ವಂಶಪರಂಪರೆ ಎಂಬುದಾಗಿ ನಾಲ್ಕು ಭಾಗ ಮಾಡಿದರು. ಈ ರೀತಿ ಮಾಡಿದುದರಲ್ಲಿ ಎಂಟು ಪರಂಪರೆ ವಂಶಗಳಾದವು. ಅವರನ್ನೇ ಗೋತ್ರಕಾರರೆಂದು ಕರೆಯಲಾಯಿತು. ಆ ಎಂಟು ಜನ ಗೋತ್ರಕಾರರ ಮೂಲಪುರುಷರು:
1. ಜಮದಗ್ನಿ – ಭೃಗು ವಂಶಸ್ಥರು (1)
2. ಭರದ್ವಾಜ – ಆಂಗೀರಸ ವಂಶಸ್ಥರು (2)
3. ಗೌತಮ – ಮೇಲಿನಂತೆ
4. ಕಾಶ್ಯಪ – ಮರೀಚಿ ವಂಶಸ್ಥರು (3)
5. ವಸಿಷ್ಠ – ಮೇಲಿನಂತೆ
6. ಅಗಸ್ತ್ಯ – ಮೇಲಿನಂತೆ
7. ಅತ್ರಿ – ಅತ್ರಿಯೇ ಮೂಲಪುರುಷರು ಅಥವಾ ಅವರ ವಂಶಸ್ಥರು (4)
8. ವಿಶ್ವಾಮಿತ್ರ – ಅತ್ರಿ ಋಷಿಯ ವಂಶಸ್ಥರು
ಈ ರೀತಿ ನಾಲ್ಕುಜನ ಮೂಲಪುರುಷರಿಂದ ಉತ್ಪನ್ನರಾದ ಗೋತ್ರಕಾರರು ಅವರವರ ವಂಶದಲ್ಲಿ (ಸಗೋತ್ರ) ಹೆಣ್ಣು ಕೊಟ್ಟು ತರುವುದು ನಿಷೇಧವು. ಒಂದು ಗೋತ್ರದವರು ಇನ್ನೊಂದು ಗೋತ್ರದವರಲ್ಲಿ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ಮಾಡಬಹುದು.
ಮೇಲೆ ತಿಳಿಸಿದ ಎಂಟುಜನ ಗೋತ್ರಕಾರರು ಸ್ಥಿರಪಟ್ಟಮೇಲೆ ಹೊಸದಾಗಿ ಇನ್ನು ಹತ್ತುಋಷಿವಂಶಸ್ಥರನ್ನು ಸೇರಿಸಲಾಯಿತು. ಈ ರೀತಿಯಲ್ಲಿ ಹೊಸದಾಗಿ ಬಂದ ಬ್ರಾಹ್ಮಣರು ಕ್ಷತ್ರಿಯಕುಲಕ್ಕೆ ಸೇರಿದವರಾಗಿ ಅನಂತರ ಕಾಲದಲ್ಲಿ ಪುನಃ ಬ್ರಾಹ್ಮಣಕುಲಕ್ಕೆ ಸೇರಿದವರಾದರು. ಎಂದರೆ ಭೃಗುವಂಶ ಅಥವಾ ಆಂಗೀರಸ ವಂಶಕ್ಕೆ ಸೇರಿದವರಾದರು. ಇಂತಹವರನ್ನೆಲ್ಲಾ ಕೇವಲರು ಅಥವಾ ಪ್ರತ್ಯೇಕಿಸಲ್ಪಟ್ಟ ಭಾರ್ಗವರು ಅಥವಾ ಆಂಗೀರಸರು ಎಂದು ಕರೆಯಲ್ಪಟ್ಟವರಾದರು. ಇವರೆಲ್ಲಾ ಮೇಲೆ ತಿಳಿಸಿದವರೊಂದಿಗೆ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ನಡೆಸಬಹುದೆಂದು ಎಲ್ಲರೂ ಒಪ್ಪಿದವರಾದರು. ಆ ಹತ್ತು ಮಂದಿ ಈ ರೀತಿಯಲ್ಲಿದ್ದಾರೆ:-
1. ವೀತಹವ್ಯ – ಭೃಗು ವಂಶವನ್ನವಲಂಬಿಸಿದವರು
2. ಮೈತ್ರೇಯ – ಮೇಲಿನಂತೆ
3, ಶುನಕ – ಮೇಲಿನಂತೆ
4. ವೇನ – ಮೇಲಿನಂತೆ
5. ರಥೀತರ – ಆಂಗೀರಸ ಗೋತ್ರವನ್ನವಲಂಬಿಸಿದವರು
6. ಮುದ್ಗಲ – ಮೇಲಿನಂತೆ
7. ವಿಷ್ಣುವೃದ್ಧ – ಮೇಲಿನಂತೆ
8. ಹಾರೀತ – ಮೇಲಿನಂತೆ
9. ಕಣ್ವ – ಮೇಲಿನಂತೆ
10.ಸಂಕೃತಿ -ಮೇಲಿನಂತೆ
ಪ್ರಕೃತ ಕಾಲದಲ್ಲಿ ಭರತಖಂಡದ ಅಖಿಲ ಬ್ರಾಹ್ಮಣರೆಲ್ಲರೂ 18 ಗುಂಪುಗಳಾಗಿ ವಿಭಾಗಿಸಲ್ಪಟ್ಟಿರುವರು. ಇವರೆಲ್ಲರೂ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸಬಹುದು. ಆದರೆ ತಮ್ಮ ತಮ್ಮ ಗುಂಪಿನಲ್ಲೇ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸುವುದು ನಿಷೇಧಿಸಲ್ಪಟ್ಟಿರುವುದು…
ಹಿಂದೂ ಧರ್ಮದ ವಿವಾಹಗಳಲ್ಲಿನ ಪ್ರತಿಯೊಂದು ಪದ್ಧತಿಯು ಅದರದ್ದೇ ಆದ ಅರ್ಥವನ್ನು, ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಮದುವೆಗೂ ಮುನ್ನ ಹುಡುಗ ಮತ್ತು ಹುಡುಗಿಯ ಗೋತ್ರವನ್ನು ನೋಡಿ ವಿವಾಹವನ್ನು ನಿಶ್ಚಯಿಸಲಾಗುತ್ತದೆ. ಒಂದೇ ಗೋತ್ರದ ಹುಡುಗ ಮತ್ತು ಹುಡುಗಿಗೆ ಯಾಕೆ ಮದುವೆ ಮಾಡುವುದಿಲ್ಲ ಗೊತ್ತೇ..? ಒಂದೇ ಗೋತ್ರದಲ್ಲಿ ಮದುವೆ ಮಾಡಿದರೆ ಏನಾಗುವುದು..?
ಸಪ್ತಋಷಿಗಳ ವಂಶಸ್ಥರಿಂದ ರಚಿತವಾದ ಗೋತ್ರ:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗೋತ್ರಗಳು ಸಪ್ತಋಷಿಗಳ ವಂಶಸ್ಥರ ರೂಪದಲ್ಲಿವೆ. ಗೌತಮ, ಕಶ್ಯಪ, ವಸಿಷ್ಠ, ಭಾರದ್ವಜ, ಅತ್ರಿ, ಅಂಗಿರಸ, ಮೃಗು ಈ 7 ಋಷಿಗಳನ್ನು ಸಪ್ತಋಷಿಗಳೆಂದು ಪರಿಗಣಿಸಲಾಗುತ್ತದೆ. ವೇದಗಳ ಕಾಲದಿಂದಲೇ ಗೋತ್ರಗಳ ಪ್ರಾಮುಖ್ಯತೆ ಆರಂಭವಾಯಿತು ಎಂದು ಹೇಳಲಾಗುತ್ತದೆ. ವಾಸ್ತವವಾಗಿ ರಕ್ತ ಸಂಬಂಧಿಗಳ ನಡುವಿನ ವಿವಾಹವನ್ನು ತಪ್ಪಿಸಲು ಇದನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಇದರೊಂದಿಗೆ ಒಂದೇ ಗೋತ್ರದ ಹುಡುಗರು ಮತ್ತು ಹುಡುಗಿಯರು ಮದುವೆಯಾಗಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ಸಹ ಮಾಡಲಾಗಿದೆ.
ಆದರೆ ದೇವಸ್ಥಾನದಲ್ಲಿ ನಿಮ್ಮ ಹೆಸರಲ್ಲಿ ಪೂಜೆ ಮಾಡುವಾಗ ನಿಮ್ಮ ಹೆಸರು, ಜನ್ಮ ನಕ್ಷತ್ರ ಮತ್ತು ಗೋತ್ರ ವಿಚಾರಿಸಿ ನಂತರ ಸಂಕಲ್ಪ ಮಾಡುವರು.
ನಿಮದ್ಯಾವ ಗೋತ್ರ..?
ಕೆಲವರಿಗೆ ತಮ್ಮ ಗೋತ್ರದ ಬಗ್ಗೆ ಯಾವುದೇ ಅರಿವು ಇಲ್ಲದೆ ಚಡಪಡಿಕೆ ಉಂಟಾಗುತ್ತದೆ. ಮನೆಯ ಹಿರಿಯರಿಗೂ ತಿಳಿಯದಿದ್ದಾಗ ಗಾಬರಿಪಡುವ ಅಗತ್ಯವಿಲ್ಲ. ಏಕೆಂದರೆ ಜನ್ಮ ನಕ್ಷತ್ರಗಳ ಮೂಲಕವೂ ತಿಳಿಯಬಹುದು.
ಯಾರ ಜನನ ಅಶ್ವನಿ, ಮಗೆ ಮತ್ತು ಮೂಲ ನಕ್ಷತ್ರಗಳಲ್ಲಾಗಿದ್ದರೆ, ಆರಂಭದಲ್ಲಿ ದೆಸೆ ಕೇತು, ಹಾಗಾಗಿ ನಿಮ್ಮ ಗೋತ್ರ ಪುರಂದರ ಆಗುತ್ತದೆ. ಯಾರ ಜನನ ಭರಣಿ, ಹುಬ್ಬ ಮತ್ತು ಪೂರ್ವಾಷಾಢ ನಕ್ಷತ್ರಗಳಾದರೆ ಆರಂಭದ ದೆಸೆ ಶುಕ್ರ. ಹಾಗಾಗಿ ನಿಮ್ಮ ಗೋತ್ರ ಭಾರದ್ವಾಜ ಆಗುವುದು.
ಯಾರ ಜನನ ಕೃತಿಕ, ಉತ್ತರೆ ಮತ್ತು ಉತ್ತರ ಆಷಾಢ ನಕ್ಷತ್ರಗಳಾದರೆ ಆರಂಭದ ದೆಶೆ ರವಿ. ಹಾಗಾಗಿ ಅಗಸ್ತ್ಯ ಗೋತ್ರ ಆಗುವುದು. ಯಾರ ಜನನ ರೋಹಿಣಿ, ಹಸ್ತಾ ಮತ್ತು ಶ್ರವಣ ನಕ್ಷತ್ರಗಳಾದರೆ, ಆರಂಭದ ದೆಶೆ ಚಂದ್ರ. ಹಾಗಾಗಿ ನಿಮ್ಮ ಗೋತ್ರ ಗೌತಮ ಆಗುವುದು.
ಯಾರ ಜನನ ಮೃಗಶಿರ, ಚಿತ್ರ ಮತ್ತು ಧನಿಷ್ಟಗಳಾದರೆ ಆರಂಭದ ದೆಶೆ ಮಂಗಳ ಹಾಗಾಗಿ ಗೋತ್ರ ವಿರೂಪಾಕ್ಷ ಆಗುವುದು. ಜನನ ಆರಿದ್ರ, ಸ್ವಾತಿ ಮತ್ತು ಶತಭಿಷ ಗಳಾದರೆ ಆರಂಭದ ದೆಸೆ ರಾಹು. ಹಾಗಾಗಿ ಗೋತ್ರ ವಾಮದೇವ ಆಗುವುದು.
ಯಾರ ಜನನ ಪುನರ್ವಸು, ವಿಶಾಖ ಮತ್ತು ಪೂರ್ವಭಾದ್ರವಾಗಿರುತ್ತದೋ ಆರಂಭದ ದೆಶೆ ಗುರು. ಹಾಗಾಗಿ ನಿಮ್ಮದು ವಸಿಷ್ಠ ಗೋತ್ರ ಆಗಲಿದೆ.
ಯಾರ ಜನನ ಪುಷ್ಯ, ಅನುರಾಧ ಮತ್ತು ಉತ್ತರಭಾದ್ರಗಳಾದರೆ ಆರಂಭದ ದೆಶೆ ಶನಿ. ಹಾಗಾಗಿ ನಿಮ್ಮದು ಕಾಶ್ಯಪ ಗೋತ್ರ ಆಗುವುದು.
ಯಾರ ಜನನ ಆಶ್ಲೇಷ, ಜ್ಯೇಷ್ಠ ಮತ್ತು ರೇವತಿ ನಕ್ಷತ್ರಗಳಲ್ಲಿ ಆಗಿರುತ್ತದೋ ಪ್ರಾರಂಭದ ದೆಶೆ ಬುಧ. ಹಾಗಾಗಿ ನಿಮ್ಮದು ಕಾತ್ಯಾಯನ ಗೋತ್ರ ಆಗುವುದು. ಎಲ್ಲಾ ಗ್ರಹಗಳ ಕವಚ ಮಂತ್ರ ಪಠಿಸಿದಾಗ ಆಯಾ ಗ್ರಹಗಳ ಗೋತ್ರ ತಿಳಿಯುತ್ತದೆ. ಒಂದೇ ನಕ್ಷತ್ರ, ಗೋತ್ರ ಆದರೆ ಸಂಬಂಧಿತರಲ್ಲಿ ವಿವಾಹ ಮಾಡಬಾರದು.






