4 ಕೋಟಿ 10 ಲಕ್ಷ ದಾನ ಮಾಡಿದ ಉಡುಪಿಯ ಹೃದಯವಂತ ದಾನಶೂರ ಪ್ರಕಾಶ್ ಶೆಟ್ಟಿ

Views: 27
ಕುಂದಾಪುರ:ನಮ್ಮ ನಡುವೆ ಕೋಟ್ಯಂತರ ಜನರು ಸಿರಿವಂತರು ಇದ್ದರೂ, ತಮ್ಮಲ್ಲಿರುವ ಸಂಪತ್ತನ್ನು ದಾನ ಮಾಡುವುದಕ್ಕೆ ದೊಡ್ಡ ಮನಸ್ಸು ಬೇಕು. ಹೃದಯವಂತಿಕೆ ಬೇಕು, ಅಂಥ ಮನಸ್ಸಿದ್ದವರು ಕೋಟಿಗೊಬ್ಬರು ಸಿಗುತ್ತಾರೆ. ಹೆಸರಾಂತ ಉದ್ಯಮಿ ಗೋಲ್ಡ್ ಫಿಂಚ್ ಸಮೂಹ ಸಂಸ್ಥೆಗಳ ಮಾಲೀಕ ಉಡುಪಿ ಮೂಲದ ಪ್ರಕಾಶ್ ಶೆಟ್ಟಿ ಸತತ ಐದನೇ ವರ್ಷವೂ ಸಾವಿರಾರು ಬಡವರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಹುಟ್ಟೂರು ಉಡುಪಿಯ ಸಣ್ಣ ಹಳ್ಳಿ. ಮನೆಯಲ್ಲಿ ಹಾಸಿಹೊದ್ದ ಬಡತನ. ಕಾಸಿಲ್ಲದ ಜೇಬು. ಆದ್ರೆ, ಖಾಲಿ ಕೈಯಲ್ಲಿ ಬೆಂಗಳೂರು ಸೇರಿದ್ದ ಅವರು, ಈಗ ಅದ್ವಿತಿಯ ಸಾಧಕರು. ಸಾಧನೆಯತ್ತ ಹೆಜ್ಜೆ ಇಟ್ಟವರಿಗೆ ಅವರ ಬದುಕೇ ಒಂದು ಸ್ಫೂರ್ತಿ. ಸೋಲು-ಗೆಲುವಿನ ನಡುವಿನ ಅವರ ಕಠಿಣ ಪರಿಶ್ರಮ ಲಕ್ಷಾಂತರ ಜೀವಗಳಿಗೆ ಬೆಳಕಾಗಿದೆ. ಇವರು ಪ್ರಕಾಶ್ ಶೆಟ್ಟಿ. ಕರಾವಳಿಗರ ಪಾಲಿನ ದಾನಶೂರ.
ಅಂದ್ಹಾಗೆ ಪ್ರಕಾಶ್ ಶೆಟ್ಟಿ, ಗೋಲ್ಡ್ ಫಿಂಚ್ ಹೊಟೇಲ್ ಸಮೂಹ ಮಾಲೀಕರು. ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧ ಕಡೆ ಉದ್ಯಮದಲ್ಲಿ ಛಾಪು ಮೂಡಿಸಿದ್ದಾರೆ. 2019ರಲ್ಲಿ ಬಾಧಿಸಿದ ಕೊರೊನಾ ಸೋಂಕು ಹಲವರ ಬದುಕು ಬೆಂಗಾಡಾಗಿಸಿತು. ಅದೇ ಬೆಂಗಾಡಿಗೆ ಇವರ ಸಹಾಯ ಹಸ್ತ ಬದುಕು ಹಸನಾಗಿಸಿತು. ಅಂದಿನಿಂದ ಆರಂಭವಾದ ದಾನಧರ್ಮ ಈವರೆಗೂ ಮುಂದುವರೆದಿದೆ.
ಹೌದು ಅಂದಿನಿಂದ ಶುರುವಾದ ದಾನ, ಈವರೆಗೂ ನಿಂತಿಲ್ಲ. ಸಾವಿರಾರು ಮಂದಿಗೆ ನೆರವು ವಿತರಿಸಿದ್ದ ಪ್ರಕಾಶ್ ಶೆಟ್ಟಿ, ತಮ್ಮ ಸಂಪತ್ತಿನ ಒಂದಂಶವನ್ನು ಪ್ರತಿವರ್ಷ ದಾನ ಮಾಡ್ತಿದ್ದಾರೆ. ಆ ದಾನದ ಪರ್ವಕ್ಕೆ ಈಗ ಐದನೇ ವರ್ಷ. ಈ ಬಾರಿ 1850 ಕುಟುಂಬಗಳಿಗೆ ಆಶಾ ಪ್ರಕಾಶ್ ಶೆಟ್ಟಿ ಹೆಸರಲ್ಲಿ ನೆರವು ವಿತರಿಸಿದ್ದಾರೆ.

ಸ್ಥಳದಲ್ಲೇ ಬಂದಿದ್ದ 2 ಸಾವಿರಕ್ಕೂ ಹೆಚ್ಚು ಮಂದಿಗೆ ಚೆಕ್ ನೀಡಿ ನೆರವು
ಎರಡು ಸಾವಿರಕ್ಕೂ ಹೆಚ್ಚು ಬಂದಿದ್ದ ಅರ್ಜಿಗಳ ಪೈಕಿ 97 ಶೇಕಡಾದಷ್ಟು ಮಂದಿಗೆ ನೆರವು ನೀಡಿದ್ದಾರೆ. ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಮೊದಲ ಶ್ರೇಣಿ, ಉನ್ನತ ಶಿಕ್ಷಣಕ್ಕಾಗಿ, ಮನೆ ಇಲ್ಲದವರು, ರೋಗ ಬಾಧಿತರು, ಅಂಗವೈಕಲ್ಯ, ಬಡವರನ್ನು ಗುರುತಿಸಿ ಸಹಾಯ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರನಟ ರಮೇಶ್ ಅರವಿಂದ್, ನೊಂದ ಜೀವಗಳಿಗೆ ಬದುಕಿನ ಸ್ಫೂರ್ತಿ ತುಂಬಿದ್ರು. ಅಶಕ್ತರಿಗೆ ನೆರವು ನೀಡುವ ಮಟ್ಟಕ್ಕೆ ಬೆಳೆಯುವಂತೆ ಹುರಿದುಂಬಿಸಿದ್ರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ ಆಳ್ವಾ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಅವರ ಪುತ್ರ, ಎಂಆರ್ಜಿ ಸಂಸ್ಥೆಯ ಆಡಳಿತ ನಿರ್ದೇಶಕ ಗೌರವ್ ಶೆಟ್ಟಿ ಉಪಸ್ಥಿತರಿದ್ರು.. ಸ್ಥಳದಲ್ಲೇ ಬಂದಿದ್ದ 2 ಸಾವಿರಕ್ಕೂ ಹೆಚ್ಚು ಮಂದಿಗೆ ಚೆಕ್ ನೀಡಿ ನೆರವು ವಿತರಿಸಿದ್ರು.
ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಉದ್ಯಮಿ ಪ್ರಕಾಶ್ ಶೆಟ್ಟಿ, ಬಡವರ ನೋವು ನನಗೆ ಗೊತ್ತಿದೆ. ನನ್ನ ಊರಿನ ಮಂದಿಗೆ ಜಾತಿ ಭೇದ ಇಲ್ಲದೆ ನೆರವು ನೀಡಬೇಕೆಂಬ ಕನಸಿತ್ತು. ಅದೀಗ ನನಸಾಗಿದೆ ಅಂತ ಹೃದಯವೈಶಾಲ್ಯತೆ ಮೆರೆದ್ರು. 2019ರಲ್ಲಿ ಮೊದಲ ವರ್ಷ ಒಂದು ಕೋಟಿಯಿಂದ ಆರಂಭಿಸಿದ್ದ ನೆರವು ಈ ಬಾರಿ ನಾಲ್ಕು ಕೋಟಿ ಹತ್ತು ಲಕ್ಷಕ್ಕೆ ಏರಿದೆ ಅಂತ ಹೇಳಿದ್ರು.
ಬಡತನದ ನೆರಳಲ್ಲಿ ಬೆಳೆದು ಬಂದ ಪ್ರಕಾಶ್ ಶೆಟ್ಟಿ, ಬಡವರತ್ತ ತಮ್ಮ ತುಡಿತ ನಿಲ್ಲಿಸಿಲ್ಲ. ಸಹಾಯ ಬೇಡಿದವರಿಗೆ ನೆರವಿನ ಹಸ್ತ ಚಾಚಿದ್ದಾರೆ. ಆ ಮೂಲಕ ಕೆರೆಯ ನೀರನ್ನು ಕೆರೆಗೆ ಚೆಲ್ಲು ಎನ್ನುವ ಕಾಯಕಕ್ಕೆ ಇಳಿದಿರುವುದು ಜನ ಮೆಚ್ಚುಗೆಗೆ ಪಾತ್ರವಾಗಿದೆ.






