ಕೃಷಿ ಚಟುವಟಿಕೆಯನ್ನೇ ನಂಬಿರುವ ಜನರು ಹುತ್ತಕ್ಕೆ ಕೋಳಿ ರಕ್ತ, ಮೊಟ್ಟೆ ಅರ್ಪಿಸಿ ವಿಭಿನ್ನ ರೀತಿಯ ಷಷ್ಠಿ ಆಚರಣೆ

Views: 0
ಚಾಮರಾಜನಗರ: ನಾಡಿನೆಲ್ಲೆಡೆ ಇಂದು ಶ್ರದ್ಧಾ-ಭಕ್ತಿಯಿಂದ ಷಷ್ಠಿ ಆಚರಣೆ ಮಾಡುತ್ತಿದ್ದು, ಅದರಂತೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ಕೂಡ ಷಷ್ಠಿಯನ್ನು ವಿಭಿನ್ನವಾಗಿ ಹಲವರು ಆಚರಿಸಿ ಗಮನ ಸೆಳೆದಿದ್ದಾರೆ.
ಹಾವಿನ ಹುತ್ತಕ್ಕೆ ಹಾಲು, ಬೆಣ್ಣೆ, ಪಂಚಾಮೃತದ ತನಿ ಎರೆಯುವುದು ಸಾಮಾನ್ಯ. ಆದರೆ, ಚಾಮರಾಜನಗರ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ಮೊಟ್ಟೆಯನ್ನು ಅರ್ಪಿಸಿ ಭಕ್ತಿ-ಭಾವದಿಂದ ನಾಗಪ್ಪನಿಗೆ ನಮಿಸಿದ್ದಾರೆ. ಇನ್ನು ನಗರದ ಉಪ್ಪಾರ ಬಡಾವಣೆ, ಮಲ್ಲಯ್ಯನಪುರ, ಉತ್ತುವಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿ ಹೀಗೆ ಬಹುತೇಕ ಕಡೆ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ನಾಗಪ್ಪನಿಗೆ ನಮಿಸಿ, ಇಷ್ಟಾರ್ಥ ಈಡೇರಿಕೆಗೆ ಬೇಡಿದ್ದಾರೆ.
ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ಬಲಿ ಕೊಟ್ಟು ಕೋಳಿ ತಲೆ, ಮೊಟ್ಟೆಯನ್ನು ಹುತ್ತದೊಳಗೆ ಹಾಕುತ್ತಾರೆ. ಭಯ ಭಕ್ತಿಯಿಂದ ಈ ಹಬ್ಬ ಆಚರಿಸಲಿದ್ದು, ಪೂಜೆ ಆಗುವವರೆಗೂ ಒಂದು ಹನಿ ನೀರನ್ನು ಕುಡಿಯುವುದಿಲ್ಲ.
ಕೋಳಿ ಬಲಿಕೊಟ್ಟರೆ ಸರ್ಪ ಸಂಬಂಧದ ತೊಂದರೆ ನಿವಾರಣೆ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ ಎಂದು ಹಲವರ ನಂಬಿಕೆಯಾಗಿದ್ದು, ಅದರಂತೆ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇನ್ನು, ಕೋಳಿ ಬಲಿ ಕೊಡದವರು ಹುತ್ತಕ್ಕೆ ಹಣ್ಣು, ಹಾಲು, ಬೆಣ್ಣೆ, ತುಪ್ಪ ಅರ್ಪಿಸಿ ಷಷ್ಠಿ ಆಚರಣೆ ಮಾಡಿದ್ದಾರೆ.






