ಕಾಳಾವರ ಶ್ರೀ ಕಾಳಿಂಗ (ಸುಬ್ರಮಣ್ಯ) ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ‘ಚಂಪಾ ಷಷ್ಠಿ’ ಮಹೋತ್ಸವ

Views: 24
ಕುಂದಾಪುರ: 8 ಶತಮಾನಗಳ ಹಿಂದೆ ಇಲ್ಲಿ ಈಶ್ವರ ದೇವಸ್ಥಾನ ಇತ್ತೆಂಬುದಕ್ಕೆ ಹಳೆಯ ಶಿಲಾ ಶಾಸನಗಳಿಂದ ತಿಳಿದುಬರುತ್ತದೆ. ಈಶ್ವರ ದೇವಸ್ಥಾನದ ಬಲಭಾಗದಲ್ಲಿ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನವಿದೆ. ಸುಮಾರು 500 ವರ್ಷಗಳ ಇತಿಹಾಸ ಸಾರುವ ಕಾಳಾವರ ಶ್ರೀ ಕಾಳಿಂಗ ದೇವಸ್ಥಾನಕ್ಕೆ ಶ್ರೀ ಸುಬ್ರಹ್ಮಣ್ಯದಿಂದ ಕಾಳಿಂಗ ಸರ್ಪವೊಂದು ತೆವಳುತ್ತಾ ಇಲ್ಲಿ ಬಂದು ನೆಲೆ ನಿಂತ ಸ್ಥಳಕ್ಕೆ ‘ಕಾಳಾವರ’ ಎಂಬ ಹೆಸರು ಬರುವುದಕ್ಕೆ ಕಾರಣವಾಗಿದೆ ಎಂಬುವುದು ಪ್ರತೀತಿ.

ಇದಕ್ಕೆ ಸಾಕ್ಷಿಯೆಂಬಂತೆ ದೇವಸ್ಥಾನದ ಒಂದೂವರೆ ಕಿ.ಮೀ. ದೂರದಲ್ಲಿ ಹಾವು ತೆವಳಿದಂತಿರುವ ಹೊಳೆ ಹಾಗು ಉದ್ಭವಗೊಂಡಿರುವ ಸ್ಥಳದಲ್ಲಿ ಬಾವಿಯಾಕಾರದ ಹೊಂಡ ಕಣ್ಣಿಗೆ ಕಾಣಸಿಗುತ್ತದೆ. ಅಲ್ಲದೇ ಕಾಳಿಂಗ ದೇವರ ಹಿಂಬದಿಯಲ್ಲಿ ಮುನಿಯೊಬ್ಬರು ತಪಸ್ಸು ಮಾಡಿದ್ದರೆನ್ನಲಾದ ಬಾವಿಯೊಂದರಲ್ಲಿ ಹುತ್ತ ಬೆಳೆದು ನಿಂತಿದೆ.
ಕಾಳಾವರದ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ಬಂದು ದೇವರಿಗೆ ಹರಕೆ ಹೊತ್ತುಕೊಂಡರೆ ಸಂತಾನ ಭಾಗ್ಯ ದೊರೆಯದವರಿಗೆ ಮಕ್ಕಳಾಗುತ್ತವೆ. ಚರ್ಮರೋಗ ಮೊದಲಾದ ವ್ಯಾಧಿಗಳಿಂದ ಮುಕ್ತಿ ಪಡೆಯುತ್ತಾರೆ ಎನ್ನುವ ನಂಬಿಕೆ ಭಕ್ತರದ್ದು.

ಹರಕೆ ಸಂಪ್ರದಾಯ
ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ ಸಂಬಂಧಿ, ಸಂತಾನ ಸಂಬಂಧಿ, ಚರ್ಮಾಧಿ ರೋಗರುಜಿನಗಳ ಸಂದರ್ಭದಲ್ಲಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಷಷ್ಠಿಯ ದಿನ ಸಮರ್ಪಿಸುತ್ತಾರೆ. ನಾಗ(ಸುಬ್ರಮಣ್ಯ )ನಿಗೆ ಶೃಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಶೃಂಗಾರ ಪುಷ್ಪವನ್ನು ಸಮರ್ಪಿಸುತ್ತಾರೆ. ಅಲ್ಲದೇ ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕೃತಿ ದೇವರಿಗೆ ಸಮರ್ಪಿಸುವುದರ ಮೂಲಕ ಹರಕೆ ಸಲ್ಲಿಸುತ್ತಾರೆ.
ಈ ಹರಕೆಗಳನ್ನು ಹಾಗೂ ಶೃಂಗಾರ ಬಾಳೆಹಣ್ಣು ಮೊದಲಾದವುಗಳನ್ನು ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಈ ಕ್ಷೇತ್ರದಲ್ಲಿ ಹಿರಿ ಷಷ್ಠಿ ಮತ್ತು ಕಿರಿ ಷಪ್ಠಿ ನಡೆಯುತ್ತದೆ.
ಕಾಳಾವರ ಶ್ರೀ ಕಾಳಿಂಗ ಸುಬ್ರಮಣ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಂಪಾ ಷಷ್ಠಿ ಮಹೋತ್ಸವ-2023
ಕಾಳಾವರ ಶ್ರೀ ಕಾಳಿಂಗ ಸುಬ್ರಹ್ಮಣ್ಯ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 18 ಮತ್ತು 19ರಂದು ಚಂಪಾ ಷಷ್ಠಿ ಮಹೋತ್ಸವ .
ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ನವಕುಂಭ ಸ್ವಪನ, ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಪ್ರಾತ:ಕಾಲ 4:30 ಕ್ಕೆ ಅಭಿಷೇಕ, ಪಂಚಾಮೃತ ಸೇವೆ, ಮಂಗಳಾರತಿ, ಹಣ್ಣು ಕಾಯಿ, ಹೂ ಕಾಯಿ, ಕಲಶ ಸಮರ್ಪಣೆ ದೇವರ ದರ್ಶನ ,ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ಬೆಳಿಗ್ಗೆ 10ಕ್ಕೆ ಉರುಳು ಸೇವೆ,ಮಧ್ಯಾಹ್ನ 12ಕ್ಕೆ ಕಲಶಾಭಿಷೇಕ, ಅನ್ನಸಂರ್ಪಣೆ, ಸಂಜೆ 7 ರಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ 8:30ಕ್ಕೆ ರಂಗಪೂಜೆ ನಡೆಯಲಿದೆ
ಡಿ. 19 ರಂದು ಬೆಳಿಗ್ಗೆ ಹಾಲಿಟ್ಟುಸೇವೆ, 9ಕ್ಕೆ ನಾಗಮಂಡಲ ಸೇವೆ, ಬೆಳಗ್ಗೆ 11 ರಿಂದ ತುಲಾಭಾರ ಸೇವೆ ನಡೆಯಲಿದೆ, ಕ್ಷೇತ್ರ ಪಾಲನಿಗೆ ಪೂಜೆ , ಭೂತರಾಜನಿಗೆ ಸೇವೆ, ಯಕ್ಷಗಾನ ಬಯಲಾಟ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್ ಚಂದ್ರಶೇಖರ್ ಹೆಗ್ಡೆ ತಿಳಿಸಿದ್ದಾರೆ.











