ಧಾರ್ಮಿಕ

‘ತುಳಸಿ ಪೂಜೆ’ ಉತ್ಥಾನ ದ್ವಾದಶಿ ಸಂಭ್ರಮ

Views: 14

ತುಳಸಿ ಪೂಜೆ ಹಬ್ಬವನ್ನು ಉತ್ಥಾನ ದ್ವಾದಶಿ ಎಂದೇ ಪ್ರಸಿದ್ಧವಾಗಿದೆ. ಕಾರ್ತಿಕ ಮಾಸದಲ್ಲಿ ಬರುವ ಹಬ್ಬಗಳಲ್ಲಿ ಇದೊಂದು ದೊಡ್ಡ ಹಬ್ಬ. ಸಾಮಾನ್ಯವಾಗಿ ಪ್ರತಿ ಹಿಂದು ಧರ್ಮೀಯರ ಮನೆಯ ಅಂಗಳದಲ್ಲಿಯೂ ಕಾಣಸಿಗುವ ಈ ಪವಿತ್ರ ತುಳಸಿ ಗಿಡವನ್ನು ಸಾವಿರಾರು ವರ್ಷಗಳಿಂದ ಪೂಜಿಸುತ್ತಾ ಬಂದಿದ್ದೇವೆ.

ಕಾರ್ತಿಕ ಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ಇದು ತುಳಸಿ ಪೂಜೆ ಎಂದೇ ಪ್ರಸಿದ್ಧ. ಇಂದು ಕೃಷ್ಣನ ದಿವಸ, ತುಲಸೀ ಮತ್ತು ಶ್ರೀಮನ್ನಾ ರಾಯಣನ ವಿವಾಹದ ದಿನವೂ ಹೌದು. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲಿ, ಹೂವು, ಹಣ್ಣು, ಮಾವಿನ ಎಲೆಗಳಿಂದ ಅಲಂ ಕರಿಸಿ ಮದುವೆ ಮಂಟಪದ ಮಾದರಿಯಲ್ಲಿ ಸಿಂಗರಿಸಲಾಗುತ್ತದೆ. ಮಂಟಪದ ಸುತ್ತಲೂ ದೀಪಗಳನ್ನು ಬೆಳಗಲಾಗುತ್ತದೆ. ಇದಕ್ಕೆ ತುಳಸಿ ವೃಂದಾವನ ಎಂದು ಕರೆಯ ಲಾಗುತ್ತದೆ. ತುಳಸಿ ಗಿಡದ ಹತ್ತಿರ ಧಾತ್ರೀ (ನೆಲ್ಲಿಕಾಯಿ) ಮತ್ತು ಹುಣಸೆ ವೃಕ್ಷದ ಕೊಂಬೆಯನ್ನಿಟ್ಟು ಅದರ ಮುಂದೆ ಶ್ರೀಕೃಷ್ಣನ ಪ್ರತಿಮೆ ಅಥವಾ ಸಾಲಿಗ್ರಾಮಗಳನ್ನಿಟ್ಟು ಪೂಜೆ ಮಾಡುತ್ತಾರೆ. ಶ್ರೀಕೃಷ್ಣನ ಪ್ರತಿಮೆ ಅಥವಾ ಸಾಲಿಗ್ರಾಮ ಮತ್ತು ತುಳಸಿಗೆ ಹತ್ತಿಯ ಹಾರವನ್ನು ತೊಡಿಸಿ ವಿವಾಹ ಶಾಸ್ತ್ರವನ್ನು ನೆರವೇರಿಸಲಾಗುತ್ತದೆ.

ಆಧ್ಯಾತ್ಮಿಕ ಮಹತ್ವ: ಕಾರ್ತಿಕ ಮಾಸ ತುಳಸಿ ಪ್ರತಿಷ್ಠಾಪನೆಗೆ ಪರ್ವ ಕಾಲ. ಎಷ್ಟು ತುಳಸಿ ಗಿಡಗಳನ್ನು ಬೆಳೆಸುತ್ತಿಯೋ ಅಷ್ಟು ಜನ್ಮಗಳಲ್ಲಿ ಎಸಗಿದ ಪಾಪಗಳೆಲ್ಲವೂ ನಾಶವಾಗುತ್ತವೆ ಎಂದು ಸ್ಕಂದಪುರಾಣದ ಉಲ್ಲೇಖ. ಎಲ್ಲಿ ತುಳಸಿ ವನವಿರುವುದೋ ಅದುವೇ ಒಂದು ತೀರ್ಥಕ್ಷೇತ್ರ ಎಂದು ಪದ್ಮ ಪುರಾಣದ ವರ್ಣನೆ.

ಉತ್ಥಾನ ಎಂದರೆ ಏಳುವುದು ಎಂದರ್ಥ. ತುಳಸಿ ಎಂದರೆ ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕ. ಲಕ್ಷ್ಮೀ ಏಳುವ ದಿನ ದೀಪಾವಳಿಯಾದರೆ, ನಾರಾಯಣನು ಏಳುವ ದಿನ ಉತ್ಥಾನ ದ್ವಾದಶಿ. ನಮ್ಮ ಪುರಾಣಗಳ ಪ್ರಕಾರ ಮಹಾವಿಷ್ಣು ಆಷಾಢ ಶುದ್ಧ ಶಯನ ಏಕಾದಶಿಯಂದು ಮಲಗಿದರೆ ಕಾರ್ತಿಕ ಶುದ್ಧ ದ್ವಾದಶಿಯಂದು ಏಳುತ್ತಾನೆ. ಲಕ್ಷ್ಮೀನಾರಾಯಣರು ಜಾಗೃತಾವಸ್ಥೆಯಲ್ಲಿದ್ದರೆ ಜಗಹೃದಯವೇ ಆನಂದಮಯವಾಗಿ, ಮಂಗಳ ವಾತಾವರಣ ನೆಲೆಸಿರುತ್ತದೆ. ಆದ್ದರಿಂದ ಕಾರ್ತಿಕ ಶುದ್ಧ ದ್ವಾದಶಿಯಂದು ‘ಪ್ರಬೋಧೋತ್ಸವ’ದ ಮೂಲಕ ನಾರಾಯಣನನ್ನು ಎಬ್ಬಿಸಿ ತುಳಸಿಯೊಂದಿಗೆ ವಿವಾಹವನ್ನು ಮಾಡುವ ಪದ್ಧತಿ ಬೆಳೆದು ಬಂದಿದೆ. ಅಧ್ಯಾತ್ಮಿಕ ಸಾಧನೆಯೊಂದಿಗೆ ಆರೋಗ್ಯ ಹಾಗೂ ಪರಿಸರದ ಬಗ್ಗೆ ಜಾಗೃತಿಯನ್ನು ಉಂಟುಮಾಡುತ್ತಾ ನಮ್ಮನ್ನು ‘ಪ್ರಬೋಧ’ ಎಂದರೆ ‘ಎಚ್ಚರಿಸುವ’ ಉತ್ಸವವೇ ‘ಪ್ರಬೋಧೋತ್ಸವ’.

ಹಿರಿಯರು ಮತ್ತು ಪುರಾಣಗಳು ಹೇಳುವ ಪ್ರಕಾರ ಯಾವ ಮನೆಯಲ್ಲಿ ತುಳಸೀವನವಿರುವದೋ ಆ ಮನೆ ತೀರ್ಥಕ್ಷೇತ್ರದಂತೆ. ಆ ಮನೆಯಲ್ಲಿ ಅಕಾಲ ಮೃತ್ಯು ಅಶುಭವಾರ್ತೆ ಸುಳಿಯುವುದಿಲ್ಲ. ‘ಲಕ್ಶ್ಮೀರ್ಭವತಿ ನಿಶ್ಚಲಾ’ ಎಂಬ ಶಾಸ್ತ್ರೋಕ್ತಿಯಂತೆ ಆ ಮನೆಯಲ್ಲಿ ಸಂಪತ್ತು ಸದಾ ನೆಲೆಸುತ್ತದೆ. ತುಳಸಿಯಲ್ಲಿ ನಮ್ಮ ಪಾಪ ತಾಪಗಳನ್ನು ದೂರೀಕರಿಸಬಲ್ಲ ಸಮಸ್ತ ದೇವತೆಗಳ ಪೂಜೆ ಮಾಡಿದಂತೆ. ಔಷಧ ಗುಣಗಳಿಂದ ಕೂಡಿದ ತುಳಸಿ ವಾಯು, ಪರಿಸರವನ್ನು ಪರಿಶುದ್ಧಗೊಳಿಸುತ್ತದೆ. ಸಿದ್ಧೌಷಧವಾದ ತುಳಸಿ ಆಯುರ್ವೇದದ ಆಪ್ತಮಿತ್ರವೂ ಹೌದು.

 

ಆಚರಣೆ ಹೇಗೆ?

ಮೊದಲು ತುಳಸಿ ಕಟ್ಟೆಯನ್ನು ಶುಚಿಗೊಳಿಸಿ, ಒಂದು ಸಣ್ಣ ಮಂಟಪ ತಯಾರಿಸಿ, ರಂಗವಲ್ಲಿ, ಸಿಂಧೂರ, ನೆಲ್ಲಿಯ ಟೊಂಗೆ, ಮಾವಿನ ತಳಿರು ಮುಂತಾದ ವಿವಿಧ ಫಲ- ಪುಷ್ಪಗಳಿಂದ ಅಲಂಕರಿಸಬೇಕು. ತುಳಸಿಯ ಸನ್ನಿಧಿಯಲ್ಲಿ ಶ್ರೀ ಕೃಷ್ಣನ ಪ್ರತಿಮೆಯನ್ನು ಇಟ್ಟು, ಅರಿಶಿಣ ಕುಂಕುಮದಿಂದ ಅಲಂಕಾರ ಮಾಡಬೇಕು. ವಿಷ್ಣುವನ್ನು ಎಬ್ಬಿಸಲು ಮಂತ್ರ ಪಠಿಸುತ್ತಾ ಘಂಟಾ, ಶಂಖನಾದವನ್ನು ಮಾಡಿ, ಎಲ್ಲೆಡೆ ದೀಪ ಹಚ್ಚಿ ದೀಪೋತ್ಸವ ಆಚರಿಸಿ, ಭಗವಂತನನ್ನು ಪ್ರಾರ್ಥಿಸಬೇಕು. ಬಳಿಕ ನೈವೇದ್ಯ ಮಾಡಿ ಎಲ್ಲರಿಗೂ ಆ ಪ್ರಸಾದವನ್ನು ವಿತರಿಸಬೇಕು. ಬಳಿಕ ಸ್ತ್ರಿಯರಿಗೆ ಕುಂಕುಮ, ಅರಿಶಿನ, ಹೂವು, ಹಸಿರು ಬಳೆಗಳನ್ನು ನೀಡಬೇಕು. ಸಾಕ್ಷಾತ್ ಲಕ್ಷ್ಮೀ ಮತ್ತು ವಿಷ್ಣುವಿನ ವಿವಾಹವಾದ್ದರಿಂದ ಅವರಿಬ್ಬರ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲಿ ಎಂದು ಪ್ರಾರ್ಥಿಸಬೇಕು.

Related Articles

Back to top button
error: Content is protected !!