2024 ರ ಸಾಲಿನ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಜರಗಲಿರುವ ಕೈಮಗ್ಗ ಸೀರೆಗಳ ಉತ್ಸವ ಇದರ ಪೂರ್ವಭಾವಿ ಪದ್ಮಶಾಲಿ ಸಮಾಜದ ಸಂಘಟನಾ ಸಭೆಗೆ ಕರೆಯೋಲೆ

Views: 167
ಉಡುಪಿ:ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು 2022 ಮತ್ತು 2023ರಲ್ಲಿ ಅತ್ಯಂತ ಯಶಸ್ವಿಯಾಗಿ ಏರ್ಪಡಿಸಿ ಸರ್ವತ್ರ ಪ್ರಶಂಸೆಗೆ ಪಾತ್ರರಾದ ಸವಿನೆನಪಿನ ಗುಂಗಿನಿಂದ ಹೊರ ಬರುವ ಮುನ್ನವೇ ಮತ್ತೆ 2024ನೇ ಸಾಲಿನ ರಾಷ್ಟ್ರೀಯ ಕೈಮಗ್ಗ ದಿನ ಆಗಸ್ಟ್ 7, ಸನ್ನಿಹಿತವಾಗುತ್ತಿದೆ.
ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಈ ಸಾಲಿನ ಕೈಮಗ್ಗ ಸೀರೆಗಳ ಉತ್ಸವವನ್ನು ಆಗಸ್ಟ್ 4 ರಿಂದ ಆಗಸ್ಟ್ 11 ರವರೆಗೆ 8 ದಿನಗಳ ಕಾಲ ಪೊಡವಿಗೊಡೆಯ ಶ್ರೀ ಕೃಷ್ಣ ನ ಸನ್ನಿಧಾನದ ರಾಜಾಂಗಣ ದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳ ಅನುಗ್ರಹಾಶೀರ್ವಾದಗಳೊಂದಿಗೆ ಏರ್ಪಡಿಸಲು ಪರ್ಯಾಯ ಮಠದ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ ಹಾಗೂ ಪ್ರಾಥಮಿಕ ತಯಾರಿಗಳು ಈಗಾಗಲೇ ಆರಂಭವಾಗಿದೆ.
ಕೈ ಮಗ್ಗ ಸೀರೆಗಳ ಉತ್ಸವ ದ ಉದ್ದೇಶಿತ ಕಾರ್ಯಕ್ರಮಗಳ ಚುಟುಕು ಮುನ್ನೋಟ ಈ ಕೆಳಗಿನಂತಿದೆ. (ಅಂತಿಮ ಬದಲಾವಣೆಗಳಿಗೆ ಬದ್ಧವಾಗಿ)
1) ಆಗಸ್ಟ್ 4:00ರಂದು ಬೆಳಗ್ಗೆ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಬೃಹತ್ ಶೋಭಾಯಾತ್ರೆಯ ಮೂಲಕ ಶ್ರೀ ಕೃಷ್ಣ ಮಠದ ರಾಜಾಂಗಣಕ್ಕೆ ಪ್ರವೇಶಿಸಿ ಪರ್ಯಾಯ ಪುತ್ತಿಗೆ ಶ್ರೀಗಳ ದಿವ್ಯ ಹಸ್ತದಿಂದ ಉದ್ಘಾಟನೆ
2) ಇಡೀ ದೇಶದಾದ್ಯಂತದ ಕೈಮಗ್ಗ ಸೀರೆ ಮತ್ತು ಬಟ್ಟೆ ಗಳ ಬೃಹತ್ ಮೇಳ ಆಗಸ್ಟ್ 4 ರಿಂದ 11ರವರೆಗೆ ಎಂಟು ದಿನಗಳ ಕಾಲ ಜರಗಲಿದೆ.
3) ಎಂಟು ದಿನಗಳ ಕಾಲ ಪ್ರತಿದಿನ ಸಂಜೆ ಘಂಟೆ 6:00 ರಿಂದ 7:00 ರವರೆಗೆ ಈ ರಾಜ್ಯದ ಮಹಾನ್ ಭಾಷಣಕಾರರು / ಮೇಧಾವಿಗಳು / ವಿದ್ವಾಂಸರಿಂದ ಶಿಖರೋಪನ್ಯಾಸ ಕಾರ್ಯಕ್ರಮಗಳು.
4) ಪ್ರತಿದಿನ ಸಂಜೆ ಘಂಟೆ 7:00 ರಿಂದ ನಮ್ಮ ಸಮಾಜ ಕಂಡ ಶ್ರೇಷ್ಠ ಸಾಂಸ್ಕೃತಿಕ ಕಲಾವಿದರ ನೇತೃತ್ವದಲ್ಲಿ ವೈಶಿಷ್ಟ ಪೂರ್ಣ ಸಾಂಸ್ಕೃತಿಕ ಸರಣಿ ಕಾರ್ಯಕ್ರಮಗಳು.
5) ಆಗಸ್ಟ್ 5 ರಿಂದ10 ರವರೆಗೆ ಪ್ರತಿದಿನ ಬೆಳಗ್ಗೆ ಘಂಟೆ 10:00 ರಿಂದ ಸಂಜೆ 4:00 ರವರೆಗೆ ರಾಜ್ಯ ಮಟ್ಟದ ಭಜನಾ ಸ್ಪರ್ಧೆ.
6) ಆಗಸ್ಟ್ 4, 9 ಮತ್ತು 10 ರಂದು ಉಡುಪಿ ಸೀರೆಗಳ ಬೃಹತ್ ಸೌಂದರ್ಯ ಸ್ಪರ್ಧೆ.
7) ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳಲ್ಲಿ ಕೈಮಗ್ಗ ಸೀರೆಗಳನ್ನು ಉಟ್ಟು ಕಂಗೊಳಿಸಲಿರುವ ನಮ್ಮ ಸಮಾಜದ ಮಾತೆಯರು.
ಇಡೀ ಪದ್ಮಶಾಲಿ / ಶೆಟ್ಟಿಗಾರ ಸಮಾಜ ಒಗ್ಗಟ್ಟಾಗಿ, ಉತ್ಸವ ಆಯೋಜನ ಸಮಿತಿಯನ್ನು ರಚಿಸಿ, ಈ ನಾಡಿಗೆ ಮಹೋನ್ನತ ಉತ್ಸವವನ್ನು ಸಮರ್ಪಿಸಿ ನಮ್ಮ ಸಮಾಜದ ಘನತೆಯನ್ನು ಎತ್ತಿ ಹಿಡಿಯಬೇಕಾಗಿದೆ. ಹಾಗಾಗಿ ಈ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ, ಉತ್ಸವ ಆಯೋಜನಾ ಸಮಿತಿ ಯನ್ನು ರಚಿಸುವ ಸಲುವಾಗಿ ಇದೇ ಬರುವ ರವಿವಾರ, 09.06.2024 ರಂದು ಅಪರಾಹ್ನ 2:30ಕ್ಕೆ ಸರಿಯಾಗಿ ಕಿನ್ನಿಮೂಲ್ಲಿಯ ವೀರಭದ್ರ ಕಲಾಭವನದಲ್ಲಿ ನಮ್ಮ ಸಮಾಜದ ಬೃಹತ್ ಸಭೆಯನ್ನು ಕರೆಯಲಾಗಿದೆ.
ನಮ್ಮ ಸಮಾಜದ 16 ದೇವಸ್ಥಾನಗಳ ಮೊಕ್ತೇಸರರು / ಅಧ್ಯಕ್ಷರು ಹಾಗೂ ಸಮಿತಿಗಳ ಸದಸ್ಯರು ಮತ್ತು ಸಮಾಜದ ಪ್ರತಿಯೊಂದು ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಈ ಸಭೆಗೆ ವಿನಯಪೂರ್ವಕವಾಗಿ ಆಹ್ವಾನಿಸುತಿದ್ದೇವೆ ಹಾಗೂ ನಮ್ಮ ಎಲ್ಲಾ ದಾನಿಗಳು, ಹಿತೈಷಿಗಳು, ಪೋಷಕರು ಮತ್ತು ಪ್ರೋತ್ಸಾಹಕರೆಲ್ಲರನ್ನೂ ಆತ್ಮೀಯವಾಗಿ ಕರೆಯುತ್ತಿದ್ದೇವೆ.
ತಾವು ಈ ಸಭೆಯಲ್ಲಿ ತಮ್ಮ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಪದ್ಮಶಾಲಿ ಸಮಾಜದ ಎಲ್ಲಾ ಬಂಧು ಬಳಗದೊಂದಿಗೆ ಉಪಸ್ಥಿತರಿರಬೇಕಾಗಿ ವಿನಂತಿ.






