ಹೋಟೆಲ್ ಕೋಣೆಯಲ್ಲಿ ಅಪ್ರಾಪ್ತ ಕ್ರೀಡಾಪಟು ವಿರಾಮ ತೆಗೆದುಕೊಳ್ಳುತ್ತಿದ್ದ ವೇಳೆ ಲೈಂಗಿಕ ದೌರ್ಜನ್ಯ:ಕೋಚ್ ಅಮಾನತು
Views: 167
ಕನ್ನಡ ಕರಾವಳಿ ಸುದ್ದಿ: ಬಾಲಕಿಯ (ಶೂಟರ್ ಕ್ರೀಡಾಪಟು) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ರೀಡಾಪಟುವಿನ ಕುಟುಂಬ ಸಲ್ಲಿಸಿದ ದೂರಿನ ಆಧಾರದ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಂಗಳವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆದಾಗ್ಯೂ, ಸಾಕ್ಷಿಗಳಿಂದ ಹೇಳಿಕೆಗಳು ಹಾಗೂ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?
ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಫರಿದಾಬಾದ್‌ನ ಹೋಟೆಲ್ ಕೋಣೆಯಲ್ಲಿ ಕ್ರೀಡಾಪಟು ವಿರಾಮ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೋಚ್ ಲೈಂಗಿಕ ದೌರ್ಜನ್ಯ ಎಸಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದಾದ ಬಳಿಕ ಘಟನೆಯನ್ನು ಯಾರಿಗಾದರೂ ಹೇಳಿದ್ದಲ್ಲಿ ಆಕೆಯ ಕ್ರೀಡಾ ಭವಿಷ್ಯವನ್ನೇ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆ ಬೆಳಕಿಗೆ ಬಂದ ನಂತರ ಫರಿದಾಬಾದ್‌ನ ಪೊಲೀಸರು ಆತನ ವಿರುದ್ಧ ಪೋಕ್ಸೊ ಕಾಯ್ದೆ ಸೆಕ್ಷನ್ 6 ಮತ್ತು ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 351(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ಪಾಲ್ ಯಾದವ್ ಬಾಲಕಿಯ ಆರೋಪಗಳನ್ನು ದೃಢೀಕರಿಸಲು ಘಟನೆ ನಡೆದ ದಿನದ ಎಲ್ಲಾ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ತಕ್ಷಣವೇ ನೀಡುವಂತೆ ಹೋಟೆಲ್ ಆಡಳಿತಕ್ಕೆ ಈಗಾಗಲೇ ಕೇಳಿಕೊಂಡಿದ್ದೇವೆ ಎಂದರು.
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಮೇರೆಗೆ ಕೋಚ್ ಅಂಕುಶ್ ಅವರನ್ನು ಎಲ್ಲಾ ಕರ್ತವ್ಯಗಳಿಂದ ಅಮಾನತುಗೊಳಿಸಿದ್ದು, ಯಾವುದೇ ಹೊಸ ಹುದ್ದೆಗಳನ್ನು ನೀಡಿಲ್ಲ ಎಂದು NRAI ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಸಿಂಗ್ ಹೇಳಿದ್ದಾರೆ.






