ಯುವಜನ

ಸ್ವಯಂ ಹೆರಿಗೆ ಮಾಡಿಕೊಂಡ ಬಳಿಕ ಹಸುಳೆ ಕೊಲೆ! ಪ್ರೇಮಿಗಳ ಬಂಧನ

Views: 160

ಕನ್ನಡ ಕರಾವಳಿ ಸುದ್ದಿ: ಬೆಳಗಾವಿ ಜಿಲ್ಲೆಯ ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಹೆತ್ತ ಹಸುಳೆಯನ್ನೇ ಕೊಲೆ ಮಾಡಿದ ಪ್ರಕರಣ ಪತ್ತೆ ಮಾಡಿದ ಪೊಲೀಸರು, ಪ್ರೇಮಿಗಳನ್ನು ಬಂಧಿಸಿದ್ದಾರೆ.

ಅಂಬಡಗಟ್ಟಿಯ ಮಹಾಬಲೇಶ್ವರ ರುದ್ರಪ್ಪ ಕಾಮೋಜಿ (31) ಹಾಗೂ ಸಿಮ್ರನ್ ಮೌಲಾಸಾಬ್ ಮಾಣಿಕಬಾಯಿ (22) ಬಂಧಿತರು. ಮಾರ್ಚ್‌ 5ರಂದು ಅಂಬಡಗಟ್ಟಿಯ ಮನೆಯೊಂದರ ಹಿತ್ತಲಿನ ತಿಪ್ಪೆಗುಂಡಿಯಲ್ಲಿ ಹಸುಳೆ ಶವ ಪತ್ತೆಯಾಗಿತ್ತು. ಹಸುಳೆ ತಲೆಗೆ ಪೆಟ್ಟು ಬಿದ್ದಿದ್ದರಿಂದ ಅನುಮಾನಗೊಂಡ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಮಹಾಬಲೇಶ್ವರ ಹಾಗೂ ಸಿಮ್ರನ್‌ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ದೈಹಿಕ ಸಂಪರ್ಕದಿಂದ ಸಿಮ್ರನ್‌ ಗರ್ಭಿಣಿಯಾಗಿದ್ದರು. ಆದರೆ, ಇಬ್ಬರೂ ಮನೆಯಲ್ಲಿ ಈ ವಿಷಯ ಮುಚ್ಚಿಟ್ಟಿದ್ದರು. ಸಿಮ್ರನ್‌ ದೈಹಿಕವಾಗಿ ದುಂಡಗಿದ್ದ ಕಾರಣ ಗರ್ಭಿಯಾದ ವಿಷಯ ಮನೆಯಲ್ಲಿ ಗೊತ್ತಾಗಿರಲಿಲ್ಲ. 9 ತಿಂಗಳ ಬಳಿಕ ಮಾರ್ಚ್‌ 5ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಬಾತ್‌ರೂಮ್‌ನಲ್ಲಿ ಹೋಗಿ ಸಿಮ್ರನ್‌ ‘ಸ್ವಯಂ ಹೆರಿಗೆ’ ಮಾಡಿಕೊಂಡು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

‘ಹೆರಿಗೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಸಿಮ್ರನ್‌ ಯುಟೂಬ್‌ನಲ್ಲಿ ನೋಡಿಕೊಂಡಿದ್ದರು. ಹೆರಿಗೆ ಸಂದರ್ಭದಲ್ಲಿ ಪ್ರಿಯಕರ ಮಹಾಬಲೇಶ್ವರ ಕೂಡ ವಿಡಿಯೊ ಕಾಲ್‌ನಲ್ಲಿ ಮಾರ್ಗದರ್ಶನ ಮಾಡಿದ್ದ. ಹೆರಿಗೆಯಾದ ಬಳಿಕ ಸಿಮ್ರನ್‌ ಮಗು ಅಳದಂತೆ ಬಾಯಿಗೆ ಬಟ್ಟೆ ಕಟ್ಟಿ, ಪೆಟ್ಟಿಗೆಯಲ್ಲಿ ತುಂಬಿದ್ದರು. ಆಗ ಮಗುವಿನ ತಲೆಗೆ ಪೆಟ್ಟಾಗಿರಬಹುದು. ನಂತರ ಅದನ್ನು ತಿಪ್ಪೆಗುಂಡಿಯಲ್ಲಿ ಬಿಸಾಕಿ ಬಂದಿದ್ದರು. ಹಸುಳೆ ಶವವನ್ನು ನಾಯಿಗಳು ಎಳೆದಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದರು.

‘ಪೊಲೀಸರು ಸಾಕಷ್ಟು ತನಿಖೆ ಮಾಡಿ ಪ್ರಕರಣ ಭೇದಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದೂ ಹೇಳಿದರು.

Related Articles

Back to top button
error: Content is protected !!