ಸಾಲಿಗ್ರಾಮ ಮೇಳದಿಂದ ಹೊರಗೆ ಬಂದ ಬಡಗು ತಿಟ್ಟಿನ ಹೆಸರಾಂತ ಮುಖ್ಯ ಸ್ತ್ರೀ ವೇಷಧಾರಿ ಶಶಿಕಾಂತ್ ಶೆಟ್ಟಿ ಕಾರ್ಕಳ

Views: 447
ಕನ್ನಡ ಕರಾವಳಿ ಸುದ್ದಿ: 2025/2026 ಸಾಲಿನ ಸಾಲಿಗ್ರಾಮ ಮೇಳದ ತಿರುಗಾಟದಲ್ಲಿ ನಾನು ಭಾಗವಹಿಸುತ್ತಿಲ್ಲ.ನನ್ನ ಹಾಗೂ ಯಜಮಾನರ ವೈಯುಕ್ತಿಕ ಒಪ್ಪಂದ ಪೂರ್ಣವಾಗದೇ ಹಾಗೂ ನನ್ನ ಗೌರವಕ್ಕೆ ಹಾನಿಯಾದುದರಿಂದ, ನಾನು ಈ ಭಾರಿ ಸಾಲಿಗ್ರಾಮ ಮೇಳದ ತಿರುಗಾಟದಲ್ಲಿ ಇರುವುದಿಲ್ಲ. ಅಭಿಮಾನಿಗಳು ಸಹಕರಿಸಬೇಕು. ನನ್ನ ಹೆಸರು ಬಳಸಿಕೊಂಡಲ್ಲಿ ನಾನು ಜವಾಬ್ದಾರನಲ್ಲ.ನನಗೆ ಕೀರ್ತಿ ನೀಡಿದ ಸಾಲಿಗ್ರಾಮ ಮೇಳದ ಮುಂದಿನ ತಿರುಗಾಟ ಯಶಸ್ವಿಯಾಗಿ ನಡೆಯಲಿ. ಮುಖ್ಯ ಸ್ತ್ರೀ ಪಾತ್ರಧಾರಿಗಳು ಹಾಗೂ ಹೊಸದಾಗಿ ಬಂದ ಯುವಕರಿಗೆ ಶುಭವಾಗಲಿ ಎಂದಿದ್ದಾರೆ.
2003-2004ರಲ್ಲಿ ಸಾಲಿಗ್ರಾಮಕ್ಕೆ ಮೇಳಕ್ಕೆ ಸೇರಿದ ಶಶಿಕಾಂತ ಶೆಟ್ಟರು ಶ್ರೀ ಕಿಶನ್ ಕುಮಾರ್ ಹೆಗಡೆ ಅವರ ಸಂಚಾಲಕತ್ವದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರ ಜತೆ ತಿರುಗಾಟ. ಡಾ. ವೈ. ಚಂದ್ರಶೇಖರ ಶೆಟ್ಟಿ ವಿರಚಿತ ಪ್ರಸಂಗ ‘‘ಈಶ್ವರಿ ಪರಮೇಶ್ವರಿ’’ ಪ್ರಸಂಗದ ಈಶ್ವರಿ ಎಂಬ ಅತ್ತೆಯ ಪಾತ್ರ ಖ್ಯಾತಿಯನ್ನು ತಂದುಕೊಟ್ಟಿತ್ತು. ಪರಮೇಶ್ವರಿಯಾಗಿ ಯಲಗುಪ್ಪರ ಅಭಿನಯ. ಯಲಗುಪ್ಪ- ಕಾರ್ಕಳ ಜೋಡಿಯು ಖ್ಯಾತವಾಗಿ ಅವರಿಗೆ ತಾರಾಮೌಲ್ಯವನ್ನು ತಂದುಕೊಟ್ಟಿತ್ತು. ಗರತಿ, ಗಯ್ಯಾಳಿ ಪಾತ್ರದಲ್ಲಿ ಇಬ್ಬರೂ ರಂಜಿಸಿದ್ದರು.
ಈ ಜೋಡಿಯು ಅದೇ ಖ್ಯಾತಿ, ಬೇಡಿಕೆಯನ್ನು ಈಗಲೂ ಉಳಿಸಿಕೊಂಡಿದೆ. ಮೂರೇ ವರ್ಷಗಳಲ್ಲಿ ಸಾಲಿಗ್ರಾಮ ಮೇಳದ ಮುಖ್ಯ ಸ್ತ್ರೀಪಾತ್ರಧಾರಿಯಾಗಿ ಭಡ್ತಿ. ಮಳೆಗಾಲದ ಪ್ರದರ್ಶನಗಳಲ್ಲೂ ಬಡಗುತಿಟ್ಟಿನ ಹಿರಿಯ ಕಲಾವಿದರ ಜತೆ ಅಭಿನಯ. ಕೀಚಕವಧೆ ಪ್ರಸಂಗದಲ್ಲಿ ಚಿಟ್ಟಾಣಿಯವರ ಕೀಚಕನಿಗೆ ಸೈರಂಧ್ರಿಯಾಗಿ ಅಭಿನಯಿಸಿದ್ದರು. ಅಂದು ಜಲವಳ್ಳಿ ವೆಂಕಟೇಶ ರಾಯರು ವಲಲ ಪಾತ್ರವನ್ನು ಮಾಡಿದ್ದರು. ಗೋಡೆ ನಾರಾಯಣ ಹೆಗಡೆಯವರ ಬ್ರಹ್ಮನಿಗೆ ಶಾರದೆಯಾಗಿ ಅಭಿನಯಿಸುವ ಅವಕಾಶವೂ ಸಿಕ್ಕಿತ್ತು. ಅಲ್ಲದೆ ಅನೇಕ ವರ್ಷಗಳಿಂದ ಬಡಗು ತೆಂಕಿನ ಹೆಚ್ಚಿನ ಕಲಾವಿದರ ಜತೆ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಶಿಕಾಂತರು ಪ್ರತಿಯೊಂದು ಪಾತ್ರವನ್ನೂ ತನ್ನ ಕಲ್ಪನೆಯಿಂದ ಕೆತ್ತಿ ಚಿತ್ರಿಸಲು ಪ್ರಯತ್ನಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ
ಎಲ್ಲಾ ಸ್ತ್ರೀಪಾತ್ರಗಳ ವೇಷಭೂಷಣಗಳ ಮತ್ತು ಕುಣಿತಗಳ ಬಗೆಗೆ ಪಾತಾಳ ವೆಂಕಟ್ರಮಣ ಭಟ್ಟರಿಂದಲೂ, ಸ್ವಭಾವ ಮತ್ತು ಮಾತುಗಾರಿಕೆಯ ಬಗೆಗೆ ಕೋಳ್ಯೂರು ರಾಮಚಂದ್ರ ರಾಯರಿಂದಲೂ ಮಾರ್ಗದರ್ಶನವನ್ನು ಪಡೆದುಕೊಂಡ ಕಲಾವಿದರಿವರು. ನಾಟಕ ರಂಗದ ಜೀವನ್‍ರಾಂ ಸುಳ್ಯ, ಕೃಷ್ಣಮೂರ್ತಿ ಕವತ್ತಾರು, ಪ್ರಶಾಂತ್ ಉದ್ಯಾವರ ಇವರುಗಳಿಂದ ಯಕ್ಷಗಾನದಲ್ಲಿ ನಾಟಕೀಯತೆಯ ಸಾಧ್ಯತೆಯನ್ನು ಹೇಗೆ ಬಳಸಿಕೊಳ್ಳಬಹುದೆಂಬ ಮಾಹಿತಿಯನ್ನು ಪಡೆದಿದ್ದರು.