ಸತ್ಸಂಗ ಮುಗಿಸಿ ಬರುವ ವೇಳೆ ಕಾಲ್ತುಳಿತ: 60 ಕ್ಕೂ ಹೆಚ್ಚು ಮಂದಿ ಸಾವು,

Views: 119
ಉತ್ತರ ಪ್ರದೇಶ: ಜಿಲ್ಲೆಯ ಕೊತ್ವಾಲಿ ಸಿಕಂದರಾವ್ ಪ್ರದೇಶದಲ್ಲಿ ಮಂಗಳವಾರ ಭಾರಿ ಕಾಲ್ತುಳಿತ ಸಂಭವಿಸಿದೆ. ರತಿಭಾನಪುರದ ಫುಲ್ರೈ ಗ್ರಾಮದಲ್ಲಿ ಭೋಲೆ ಬಾಬಾರವರ ಸತ್ಸಂಗ ನಡೆಯುತ್ತಿತ್ತು. ಸತ್ಸಂಗ ಮುಗಿದ ನಂತರ ಜನಸಮೂಹ ಹೊರಗೆ ಬರುತ್ತಿದ್ದಾಗ ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದ ಸಂದರ್ಭದಲ್ಲಿ ಇದುವರೆಗೆ 60 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆ 100 ದಾಟುವ ಸಾಧ್ಯತೆ ಇದೆ.
ಕಾಲ್ತುಳಿತದ ನಂತರ, ಸಿಎಸ್‌ಸಿ ಸಿಕಂದರಾವ್‌ಗೆ ಮೃತದೇಹಗಳನ್ನು ಸಾಗಿಸಲಾಗಿದೆ. ಏತನ್ಮಧ್ಯೆ, ಗಾಯಾಳುಗಳನ್ನು ಇಟಾಹ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಇನ್ನೂ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಲ್ತುಳಿತದ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಆದರೆ, ಇದುವರೆಗೂ ಒಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಲ್ಲದೇ ಸತ್ಸಂಗಕ್ಕೆ ಅನುಮತಿಯನ್ನೂ ತೆಗೆದುಕೊಂಡಿರಲಿಲ್ಲ ಎಂಬುದು ತಿಳಿದುಬಂದಿದೆ.
ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಯೋಗಿ ಅವರು ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಪರಿಹಾರ ಕಾರ್ಯವನ್ನು ವೇಗಗೊಳಿಸಲು ಮತ್ತು ಗಾಯಾಳುಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಘಟನೆಯಲ್ಲಿ ಸಾವಪ್ಪಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿಗಳು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ಇನ್ನೊಂದು ಕಡೆ ಸಿಎಂ ಸೂಚನೆ ಮೇರೆಗೆ ತನಿಖಾ ಸಮಿತಿ ರಚಿಸಲಾಗಿದೆ. ಅಪಘಾತದ ಕಾರಣವನ್ನು ತನಿಖೆ ಮಾಡಲು ಎಡಿಜಿ ಆಗ್ರಾ ಮತ್ತು ಕಮಿಷನರ್ ಅಲಿಗಢ್ ತಂಡವನ್ನು ರಚಿಸಲಾಗಿದೆ.
ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಆರ್ಥಿಕ ನೆರವು ನೀಡುವಂತೆ ಸಿಎಂ ಯೋಗಿ ಸೂಚನೆ ನೀಡಿದ್ದಾರೆ. ಅಪಘಾತದ ಕಾರಣಗಳನ್ನು ತನಿಖೆ ಮಾಡಲು ಎಡಿಜಿ, ಕಮಿಷನರ್ ನೇತೃತ್ವದಲ್ಲಿ ತಂಡವನ್ನು ರಚಿಸಲು ಸೂಚನೆಗಳನ್ನು ನೀಡಿದ್ದಾರೆ. ಇದೇ ವೇಳೆ ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆಯೂ ಸೂಚನೆ ನೀಡಲಾಗಿದೆ.






