ಸಾಮಾಜಿಕ

ವಿವಾಹ ಬಂಧನ ಮುರಿದುಕೊಳ್ಳಲು 18 ತಿಂಗಳು ಕಾಯಬೇಕು ಹೈಕೋರ್ಟ್ 

Views: 0

ಬೆಂಗಳೂರು: ಹಿಂದು ವಿವಾಹ ಕಾಯ್ದೆಯಡಿ ಪರಸ್ಪರ ಸಮ್ಮತಿಯ ಮೇರೆಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ವಿಚಾರಣಾ ನ್ಯಾಯಾಲಯ ಅರ್ಜಿಯನ್ನು ಏಕಾಏಕಿ ವಜಾಗೊಳಿಸದೆ 18 ತಿಂಗಳು ಕಾಯಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ವಿಚ್ಛೇದನದ ಅರ್ಜಿ ವಜಾಗೊಳಿಸಿದ್ದ ವಿಚಾರಣಾ ಕೋರ್ಟ್ ಆದೇಶ ರದ್ದು ಮಾಡಿರುವ ನ್ಯಾ.ಕೆ.ಎಸ್. ಮುದ್ಗಲ್, ನ್ಯಾ ಕೆ.ವಿ.ಅರವಿಂದ ಅವರಿದ್ದ ಪೀಠವು ದಂಪತಿಗೆ ಮಧ್ಯಸ್ಥಿಕೆ ಕೇಂದ್ರ ಸಂರ್ಪಸಲು ಸೂಚಿಸಿದೆ.

ಜತೆಗೆ ಮಧ್ಯಸ್ಥಿಕೆ ಕೇಂದ್ರ ವಿಚಾರಣಾ ನ್ಯಾಯಾಲಯಕ್ಕೆ ಮಧ್ಯಸ್ಥಿಕೆ ವರದಿಯನ್ನು ಸಲ್ಲಿಸಬೇಕು. ಆ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ ಕಾನೂನು ಪ್ರಕಾರ ವಿಚ್ಛೇದನ ಅರ್ಜಿಯನ್ನು ಇತ್ಯರ್ಥ ಪಡಿಸಬಹುದು ಎಂದು ಆದೇಶಿಸಿದೆ. ಪಕ್ಷಗಾರರ ಮನವಿ ಇಲ್ಲದೆ ವಿಚಾರಣಾ ನ್ಯಾಯಾಲಯ ತನ್ನಷ್ಟಕ್ಕೆ ಅರ್ಜಿಯನ್ನು ವಜಾಗೊಳಿಸಬಾರದು ಎಂದೂ ಸಹ ಪೀಠ ಹೇಳಿದೆ.

‘ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 13ಬಿ ಅನ್ವಯ, ದಂಪತಿಗಳು ಅರ್ಜಿ ಸಲ್ಲಿಸುವ ಮುನ್ನ ಒಂದು ವರ್ಷ ಪ್ರತ್ಯೇಕವಾಗಿ ವಾಸವಿರಬೇಕು. ಪಕ್ಷಗಾರರು ಜತೆಯಲ್ಲಿ ವಾಸ ಮಾಡುವಂತಿಲ್ಲ ಮತ್ತು ಇಬ್ಬರೂ ಪರಸ್ಪರ ವಿವಾಹ ಸಂಬಂಧ ಮುರಿದುಕೊಳ್ಳಲು ಒಪ್ಪಿರಬೇಕು ಹಾಗೂ ಅರ್ಜಿ ಸಲ್ಲಿಸಿದ ಆರು ತಿಂಗಳವರೆಗೆ ಅವರು ಆ ಅರ್ಜಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವಂತಿಲ್ಲ’ ಎಂದು ನ್ಯಾಯಪೀಠ ಆದೇಶಿಸಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಕೇವಲ 9 ತಿಂಗಳಿಗೆ ವಜಾಗೊಳಿಸಿದೆ. ನಿಗದಿಯಂತೆ ಪ್ರಕರಣದ ಇತ್ಯರ್ಥಕ್ಕೆ 18 ತಿಂಗಳು ಕಾಲಾವಕಾಶ ಇದೆ. ಅದಕ್ಕೂ ಹೆಚ್ಚಾಗಿ ಸೆಕ್ಷನ್ 13 ಬಿ(2) ನಿಯಮದ ಪಾಲನೆ ಆಗಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯ ತಪ್ಪೆಸಗಿದೆ ಎಂದು ನ್ಯಾಯಪೀಠ ಹೇಳಿದೆ.

ಏನಿದು ಪ್ರಕರಣದ ಹಿನ್ನೆಲೆ?

ಅರ್ಜಿದಾರ ದಂಪತಿ 2020ರ ನ.27ರಂದು ಮದುವೆಯಾಗಿದ್ದರು ಮತ್ತು ಅವರು 2021ರ ಸೆ. ನಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಇಬ್ಬರೂ ವಿವಾಹ ಬಂಧನ ಕಡಿದುಕೊಳ್ಳಲು ಹಿಂದು ವಿವಾಹ ಕಾಯ್ದೆ ಸೆಕ್ಷನ್ 13ಬಿ ಅನ್ವಯ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಳ್ಳುವುದಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಮತ್ತೆ ಒಂದುಗೂಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡಿ ಎಂದು ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಿತ್ತು. ಮಧ್ಯಸ್ಥಿಕೆದಾರರು ಇಬ್ಬರ ನಡುವೆ ಸಹಮತ ಮೂಡಿಸಲು ಪ್ರಯತ್ನಿಸಿದರಾದರೂ ಅದು ಫಲ ನೀಡಲಿಲ್ಲ. ಹಾಗಾಗಿ ಮಧ್ಯಸ್ಥಿಕೆ ಕೇಂದ್ರದ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ, ದಂಪತಿಗೆ ಈ ಪ್ರಕರಣ ಮುನ್ನಡೆಸಲು ಆಸಕ್ತಿ ಇಲ್ಲ ಎಂದು ದಾಖಲಿಸಿ ಕೇಸ್ ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Related Articles

Back to top button
error: Content is protected !!