ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ
Views: 89
ಕನ್ನಡ ಕರಾವಳಿ ಸುದ್ದಿ : ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗಂಡನ ಮನೆಯಲ್ಲೇ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗುಮ್ಮನಹಳ್ಳಿಯಲ್ಲಿ ನಡೆದಿದೆ.
ಮೃತ ಮಹಿಳೆ ರೂಪ ಆರು ತಿಂಗಳು ಗರ್ಭಿಣಿಯಾಗಿದ್ದರು.ರೂಪ ಮತ್ತು ಸುರೇಶ್ ಕಳೆದ 2 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಅಷ್ಟರಲ್ಲೇ ಗಂಡನ ಮನೆಯವರು ನೀಡಿದ ಕಿರುಕುಳಕ್ಕೆ ಬೇಸತ್ತು ರೂಪ ಸಾವಿಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಶರಣಾಗುವ ಮುನ್ನ ಬುಕ್ ಒಂದರಲ್ಲಿ ಡೆತ್ ನೋಟ್ ಬರೆದಿದ್ದಾರೆ. ಪ್ರೀತಿಯ ಅಣ್ಣನಿಗೆ ತಂಗಿ ಮಾಡುವ ನಮಸ್ಕಾರಗಳು. ಅಣ್ಣ ನಾನು ನಿನ್ನ ಮಾತು ಕೇಳದೆ ತಪ್ಪು ಮಾಡಿ ಈ ಮದುವೆ ಆದೆ. ಆದರೆ ನಾನು ಮದುವೆ ಆಗಿ 2 ವರ್ಷದಿಂದ ಒಂದು ದಿನವು ನನಗೆ ಇಲ್ಲಿ ನೆಮ್ಮದಿಯಿಲ್ಲ. ನನ್ನ ಜೀವನ ನರಕವಾಗಿದೆ. ಇನ್ನೂ ನನಗೆ ಬದುಕಲು ಇಷ್ಟವಿಲ್ಲ. ಸಾಧ್ಯವಾದರೆ ಕ್ಷಮಿಸು. ಮುಂದಿನ ಜನ್ಮವಿದ್ದರೆ ನಿನ್ನ ಋಣ ತೀರಿಸುತ್ತೇನೆ. ಅಪ್ಪ, ಅಮ್ಮ ಅಜ್ಜಿಗೆ ನನ್ನ ಕೊನೆಯ ನಮನಗಳು. ನನ್ನ ಸಾವಿಗೆ ದಯವಿಟ್ಟು ನ್ಯಾಯ ಕೊಡಿಸು. ನನ್ನ ಸಾವಿಗೆ ಅತ್ತೆ, ಮಾವ, ನನ್ನ ಗಂಡ ಮತ್ತು ಗಂಡನ ಮನೆಯವರೇ ಕಾರಣ. ನನ್ನ ಅತ್ತೆ ದೇವಮ್ಮ ಮಾಮ ನರಸಿಂಹಮೂರ್ತಿ ಮತ್ತು ಗಂಡ ಸುರೇಶ್ ಇವರಿಗೆ ಶಿಕ್ಷೆ ಕೊಡಿಸಿ ನನಗೆ ನ್ಯಾಯ ಕೊಡಿಸಿ ಅಣ್ಣ ದಯವಿಟ್ಟು. ಇಂತಿ ನಿಮ್ಮ ಪ್ರೀತಿಯ ತಂಗಿ ರೂಪ ರತ್ನಮ್ಮ ಜಿಆರ್ ಎಂದು ಡೆತ್ ನೋಟ್ ಬರೆದು ಅಣ್ಣನಿಗೆ ವಾಟ್ಸ್ ಆಪ್ ಮೂಲಕ ಫೋಟೋ ಕಳಿಸಿದ್ದಾರೆ.
ದೊಡ್ಡಬೆಳವಂಗಲ ಠಾಣೆ ಪೊಲೀಸರು ಮೃತ ರೂಪ ಗಂಡ ಸುರೇಶನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.