ಇತರೆ

ಯುವತಿ ತನ್ನ ಸಾವಿನಲ್ಲೂ ಇತರರ ಬಾಳಿಗೆ ಅಂಗಾಂಗ ದಾನ:ವ್ಯಾಪಕ ಪ್ರಶಂಸೆ

Views: 78

ಕನ್ನಡ ಕರಾವಳಿ ಸುದ್ದಿ: ಅಕಾಲಿಕವಾಗಿ ವಿಧಿವಶರಾದ ಸುಳ್ಯದ ಯುವತಿಯೋರ್ವಳು ತನ್ನ ಸಾವಿನಲ್ಲೂ ಇತರರ ಬಾಳಿಗೆ ಬೆಳಕಾಗುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಮೆದುಳು ನಿಷ್ಕ್ರಿಯಗೊಂಡಿದ್ದ ಸುಳ್ಯದ ನಿವಾಸಿ ಸಿಂಧು (23) ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ.

ಪುತ್ತೂರಿನ ಆದರ್ಶ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದ ಸಿಂಧು ಅವರು ಡಿಸೆಂಬರ್ 16ರಂದು ಪುತ್ತೂರಿನಿಂದ ಸುಳ್ಯಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅಡ್ಯಾ‌ರ್ ಎಂಬಲ್ಲಿ ಬಸ್‌ನ ಸೀಟಿನಿಂದ ಆಕಸ್ಮಿಕವಾಗಿ ಜಾರಿ ಬಿದ್ದಿದ್ದರು. ತಕ್ಷಣ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆ ಹಾಗೂ ನಂತರ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆಯ ವೇಳೆ ಅವರಿಗೆ ನರದ ಸಮಸ್ಯೆ ಉಂಟಾಗಿರುವುದು ಪತ್ತೆಯಾಯಿತು.

ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಫರ್ಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೋಮಾಗೆ ಜಾರಿದ್ದರು. ಅಂತಿಮವಾಗಿ ವೈದ್ಯರು ಸಿಂಧು ಅವರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ  ಎಂದು ಘೋಷಿಸಿದರು.

ಮಗಳು ಬದುಕುವುದಿಲ್ಲ ಎಂಬ ಕಹಿ ಸತ್ಯ ತಿಳಿದರೂ, ಅವಳ ಅಂಗಾಂಗಗಳ ಮೂಲಕ ಮತ್ತೊಂದಿಷ್ಟು ಜೀವಗಳು ಉಳಿಯಲಿ ಎಂಬ ಉದಾತ್ತ ಉದ್ದೇಶದಿಂದ ತಾಯಿ ಮಮತಾ ಮತ್ತು ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಅದರಂತೆ ಮೃತ ಯುವತಿಯ ಹೃದಯ, ಶ್ವಾಸಕೋಶ, ಕಿಡ್ನಿ, ಲಿವರ್ ಮತ್ತು ಕಣ್ಣುಗಳನ್ನು ಮೈಸೂರಿನ ಅಪೋಲೋ ಆಸ್ಪತ್ರೆ, ಮಂಗಳೂರಿನ ಕೆ.ಎಂ.ಸಿ, ಎ.ಜೆ ಮತ್ತು ನಿಟ್ಟೆ ಆಸ್ಪತ್ರೆಗಳಿಗೆ ದಾನ ಮಾಡಲಾಯಿತು.

ಮಗಳ ಸಾವಿನ ದುಃಖದ ನಡುವೆಯೂ ಸಮಾಜಕ್ಕೆ ಮಾದರಿಯಾದ ತಾಯಿ ಮಮತಾ ಅವರ ನಿರ್ಧಾರಕ್ಕೆ ಮತ್ತು ಆಂಬುಲೆನ್ಸ್‌ ಚಾಲಕರ ಸೇವೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Related Articles

Back to top button