ಮುಂಗಾರು ಮಳೆ ವಿದಾಯ..! ಕರ್ನಾಟಕಕ್ಕೆ ಭಾರಿ ಹಿನ್ನಡೆ, ಮುಂದಿನ ದಿನಗಳು ಹೇಗಿರಲಿವೆ?
Views: 5
ಕನ್ನಡ ಕರಾವಳಿ ಸುದ್ದಿ: ಈಬಾರಿಯ (2026) ಮಾನ್ಸೂನ್ ಋತು ಸಾಮಾನ್ಯಕ್ಕಿಂತ 12.6 ಪ್ರತಿಶತ ಕಡಿಮೆ ಮಳೆಯೊಂದಿಗೆ ಮುಕ್ತಾಯಗೊಂಡಿದೆ.
ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯವೇ ಅತಿ ಹೆಚ್ಚು ಬಾಧಿತವಾಗಿದ್ದು, ಶೇ. 30ರಷ್ಟು ಮಳೆ ಕೊರತೆ ಎದುರಿಸಿದೆ. ಉಳಿದಂತೆ ಕೇರಳದಲ್ಲಿ ಶೇ. 28, ಆಂಧ್ರಪ್ರದೇಶದಲ್ಲಿ ಶೇ. 25, ತಮಿಳುನಾಡಿನಲ್ಲಿ ಶೇ. 20 ಹಾಗೂ ತೆಲಂಗಾಣದಲ್ಲಿ ಶೇ. 18ರಷ್ಟು ಕೊರತೆ ದಾಖಲಾಗಿದೆ. ಇತರ ರಾಜ್ಯಗಳಲ್ಲಿ ಮಣಿಪುರ ಶೇ. 46ರಷ್ಟು ಕೊರತೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಅರುಣಾಚಲ ಪ್ರದೇಶ (ಶೇ. 44), ಪಂಜಾಬ್ (ಶೇ. 41), ಬಿಹಾರ (ಶೇ. 32), ಅಸ್ಸಾಂ (ಶೇ. 28) ಮತ್ತು ಹರಿಯಾಣ (ಶೇ. 23) ಇವೆ. ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ದೀರ್ಘಕಾಲೀನ ಮಳೆ ಇಳಿಕೆಯ ಪ್ರವೃತ್ತಿ ಕಂಡುಬರುತ್ತಿದೆ ಎಂದು ಐಎಂಡಿಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.
ಈಶಾನ್ಯ ಹಿಂಗಾರು ಅಕ್ಟೋಬರ್ ಮೂರನೇ ವಾರದ ವೇಳೆಗೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ, ಅಕ್ಟೋಬರ್ನಿಂದ ಡಿಸೆಂಬರ್ ನಡುವೆ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದ್ದರೂ, ಅಕ್ಟೋಬರ್ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ.
ಮುಂದಿನ ದಿನಗಳು ಹೇಗಿರಲಿವೆ?
ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸ್ಥಿರತೆಗೆ ಹಿಂಗಾರು (ರಬಿ) ಫಸಲು ಅತ್ಯಂತ ನಿರ್ಣಾಯಕವಾಗಲಿದೆ. ಆದರೆ, ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದ್ದು, ಮುಂದಿನ ದಿನಗಳ ಬಗ್ಗೆ ಕಳವಳ ಹುಟ್ಟುಹಾಕಿದೆ.
ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸಲು ರಫ್ತು ನಿರ್ಬಂಧಗಳು (ಅಕ್ಕಿ, ಸಕ್ಕರೆ ಇತ್ಯಾದಿ), ಆಮದು ಸುಂಕ ಕಡಿತ (ಬೇಳೆಕಾಳುಗಳು) ಮತ್ತು ಬಫರ್ ಸ್ಟಾಕ್ನಿಂದ ಧಾನ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕ್ರಮಗಳನ್ನು ಮುಂದುವರಿಸಬಹುದು.
ಹಲವು ರಾಜ್ಯಗಳಲ್ಲಿ ಬರ ಪರಿಸ್ಥಿತಿ ಘೋಷಣೆಯಾಗುತ್ತಿದ್ದು, ಸರ್ಕಾರದ ಮೇಲೆ ಬರ ಪರಿಹಾರ, ಬೆಳೆ ವಿಮೆ ಪಾವತಿ ಮತ್ತು ವಿಬಿಜಿರಾಮ್ಜಿ ಯೋಜನೆ ಅಡಿಯಲ್ಲಿ ಉದ್ಯೋಗಾವಕಾಶ ಒದಗಿಸುವ ಆರ್ಥಿಕ ಹೊರೆ ಹೆಚ್ಚಲಿದೆ.
ಜಲಾಶಯಗಳ ನೀರನ್ನು ವಿದ್ಯುತ್ ಅಥವಾ ಕೈಗಾರಿಕೆಗಳಿಗೆ ಬಳಸುವ ಬದಲು, ಕುಡಿಯುವ ನೀರು ಮತ್ತು ನಿಗದಿತ ಕೃಷಿ ನೀರಾವರಿಗೆ ಮಾತ್ರ ಮೀಸಲಿಡುವ ನಿಯಮಗಳನ್ನು ಆಡಳಿತ ವ್ಯವಸ್ಥೆ ಜಾರಿಗೆ ತರಬೇಕಾಗುತ್ತದೆ.
ಜಲಾಶಯಗಳಲ್ಲಿ ನೀರಿನ ಕೊರತೆಯಿಂದ ಜಲವಿದ್ಯುತ್ ಉತ್ಪಾದನೆ ಕುಸಿಯುತ್ತದೆ. ಮತ್ತೊಂದೆಡೆ, ಕೊಳವೆಬಾವಿಗಳಿಂದ ನೀರೆತ್ತಲು ಕೃಷಿ ಪಂಪ್ಸೆಟ್ಗಳಿಗೆ ಹಾಗೂ ಹವಾನಿಯಂತ್ರಣಗಳಿಗೆ ಬೇಡಿಕೆ ಹೆಚ್ಚುವುದರಿಂದ ಉಷ್ಣವಿದ್ಯುತ್ ಕೇಂದ್ರಗಳ ಮೇಲಿನ ಹೊರೆ ಅಧಿಕವಾಗಿದೆ.
ಧಾನ್ಯಗಳು, ಬೇಳೆಕಾಳುಗಳು ಹಾಗೂ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಚಿಲ್ಲರೆ ಹಣದುಬ್ಬರ (ಸಿಪಿಐ) ಏರಿಕೆಯ ಹಾದಿಯಲ್ಲಿದೆ. ಇದು ಜನಸಾಮಾನ್ಯರ ಮಾಸಿಕ ವೆಚ್ಚವನ್ನು ಹೆಚ್ಚಿಸಲಿದೆ. ಅಲ್ಲದೆ, ರೈತರ ಆದಾಯ ಕಡಿಮೆಯಾಗಿರುವುದರಿಂದ ಗ್ರಾಮೀಣ ಮಾರುಕಟ್ಟೆಯಲ್ಲಿ ಎಫ್ಎಂಸಿಜಿ ಉತ್ಪನ್ನಗಳು, ದ್ವಿಚಕ್ರ ವಾಹನಗಳು, ಕೃಷಿ ಉಪಕರಣಗಳು ಮತ್ತು ರಸಗೊಬ್ಬರಗಳ ಮಾರಾಟದ ಪ್ರಮಾಣ ಕುಸಿದಿದೆ.






