ಯುವಜನ

ಲಾಡ್ಜ್‌ಗೆ ಕರೆಸಿಕೊಂಡು ಯುವ ವೈದ್ಯೆಯೊಬ್ಬಳ ಬರ್ಬರ ಹತ್ಯೆ

Views: 2

ಕನ್ನಡ ಕರಾವಳಿ ಸುದ್ದಿ: ಯುವ ವೈದ್ಯೆಯೊಬ್ಬಳು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಹೈದರಾಬಾದ್‌ನ ಮಿಯಾಪುರದಲ್ಲಿ ನಡೆದಿದೆ.

ಸಂಗಾರೆಡ್ಡಿ ಪಟ್ಟಣದ ಶಾಂತಿನಗರ ನಿವಾಸಿ ಭೂಮಯ್ಯ ಅವರ ಎರಡನೇ ಪುತ್ರಿ ಡಾ. ಕೆ. ಸೃಜನಾ (27) ಕೊಲೆಯಾದ ದುರ್ದೈವಿ.

ಮಹಬೂಬ್‌ನಗರದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದ ಆಕೆ, ಪ್ರಸ್ತುತ ಹನುಮಕೊಂಡದಲ್ಲಿ ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಶಿಕ್ಷಣದ ಮೊದಲ ವರ್ಷ ವ್ಯಾಸಂಗ ಮಾಡುತ್ತಿದ್ದಳು. ಜೊತೆಗೆ ಅಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಳು. ಸುಮಾರು ಏಳು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ರವಿಕುಮಾರ್ ಎಂಬ ಯುವಕನೊಂದಿಗೆ ಪರಿಚಯವಾಗಿ, ಕಾಲಕ್ರಮೇಣ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.

ಕೆಲವು ದಿನಗಳ ಹಿಂದೆ ರವಿಕುಮಾರ್ ಆಕೆಯ ಬಳಿಯಿದ್ದ ಚಿನ್ನದ ಸರವನ್ನು ತೆಗೆದುಕೊಂಡಿದ್ದನು. ಆ ಸರವನ್ನು ಮರಳಿಸುವುದಾಗಿ ನಂಬಿಸಿ ಆಕೆಯನ್ನು ಹೈದರಾಬಾದ್‌ಗೆ ಕರೆಸಿಕೊಂಡಿದ್ದ. ಆತನ ಮಾತನ್ನು ನಂಬಿದ ಸೃಜನಾ ಕಳೆದ ತಿಂಗಳ 30ರಂದು ಹೈದರಾಬಾದ್‌ಗೆ ತೆರಳಿದ್ದಳು. ಆದರೆ ದಿನಗಳು ಕಳೆದರೂ ಆಕೆ ಹನುಮಕೊಂಡಕ್ಕೆ ಮರಳಲಿಲ್ಲ. ಆಕೆಯ ಸ್ನೇಹಿತೆಯರು ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡು ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದರು.

ಆತಂಕಗೊಂಡ ತಂದೆ ತಕ್ಷಣವೇ ಹನುಮಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಮೊಬೈಲ್ ಸಿಗ್ನಲ್ ಆಧರಿಸಿ ತನಿಖೆ ಆರಂಭಿಸಿದಾಗ, ಆಕೆ ಕೊನೆಯದಾಗಿ ಮಿಯಾಪುರದ ಹಫೀಜ್‌ಪೇಟ್ ವ್ಯಾಪ್ತಿಯಲ್ಲಿದ್ದ ಮಾಹಿತಿ ಪತ್ತೆಯಾಯಿತು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಕಳೆದ ತಿಂಗಳ 29ರಂದು ರವಿಕುಮಾರ್ ಅಲ್ಲಿನ ಲಾಡ್ಜ್ ಒಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದನು. ಪೊಲೀಸರು ಆ ಕೊಠಡಿಯ ಬೀಗ ತೆರೆದು ನೋಡಿದಾಗ ಸೃಜನಾ ಶವವಾಗಿ ಪತ್ತೆಯಾಗಿದ್ದಾಳೆ. ದಿಂಬಿನಿಂದ ಮುಖ ಒತ್ತಿ ಉಸಿರುಗಟ್ಟಿಸಿ ಆಕೆಯನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕಿಸಿದ್ದಾರೆ.

ಸದ್ಯ ಆರೋಪಿ ರವಿಕುಮಾರ್ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಪೂರ್ವಯೋಜಿತವಾಗಿಯೇ ಆಕೆಯನ್ನು ಕೊಠಡಿಗೆ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ತಂದೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಾಗಿ ಬಲೆ ಬೀಸಿದ್ದಾರೆ.

Related Articles

Back to top button
error: Content is protected !!