ಮರವಂತೆ:ದೇವಾಡಿಗರ ಸಂಘದ ವಾರ್ಷಿಕ ಮಹಾಸಭೆ:ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ

Views: 27
ಮರವಂತೆ: ಒಂದು ಸಮುದಾಯವು ಪ್ರಗತಿ ಸಾಧಿಸಬೇಕಾದರೆ ಅದರಲ್ಲಿ ವಿದ್ಯಾವಂತರ ಮತ್ತು ಉದ್ಯೋಗಿಗಳ ಸಂಖ್ಯೆ ಹೆಚ್ಚಬೇಕು. ಹಾಗಾಗಿ ಸಾಮುದಾಯಿಕ ಸಂಘಟನೆಯು ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಬೇಕು ಎಂದು ನಾವುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಹೇಳಿದರು.
ಅವರು ಮರವಂತೆ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ನಡೆದ ಮರವಂತೆ ದೇವಾಡಿಗರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಗೋಪಾಲ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೌರಿ ದೇವಾಡಿಗ, ಧರ್ಮದರ್ಶಿ ತಿಮ್ಮ ದೇವಾಡಿಗ ಶುಭ ಹಾರೈಸಿದರು.
ಸಲಹೆಗಾರ ಹೆರಿಯ ದೇವಾಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ ದೇವಾಡಿಗ ವರದಿ ಓದಿದರು. ಕೋಶಾಧಿಕಾರಿ ಗಿರೀಶ್ ದೇವಾಡಿಗ ವಂದಿಸಿದರು. ಜತೆಕಾರ್ಯದರ್ಶಿ ಸುಬ್ಬಯ್ಯ ದೇವಾಡಿಗ ನಿರೂಪಿಸಿದರು. ಗೌರವಾಧ್ಯಕ್ಷ ನಾರಾಯಣ ದೇವಾಡಿಗ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಶಿಷ್ಯ ವೇತನ ವಿತರಣೆ ನಡೆಯಿತು. ಗ್ರಾಮ ವ್ಯಾಪ್ತಿಯ ಆರು ಆಶಾ ಕಾರ್ಯಕರ್ತರನ್ನು ಮತ್ತು ಇಬ್ಬರು ಪವರ್ಮನ್ರನ್ನು ಗೌರವಿಸಲಾಯಿತು. ಸಂಘದ ವಿದ್ಯಾನಿಧಿ ಸಂಗ್ರಹಕ್ಕಾಗಿ ನಡೆಸಿದ್ದ ಲಕ್ಕಿಡಿಪ್ನ ಅದೃಷ್ಟಶಾಲಿ ದಾನಿಗಳನ್ನು ಆಯ್ಕೆ ಮಾಡಿ, ಪ್ರಕಟಿಸಲಾಯಿತು.






