ಮದುವೆ ಮನೆಯಲ್ಲೇ ಮಗಳು ಮತ್ತು ಅಳಿಯನ ಮೇಲೆ ಗುಂಡು ಹಾರಿಸಿದ ಅಪ್ಪ: ಮಗಳು ಸ್ಥಳದಲ್ಲೇ ಸಾವು,ಅಳಿಯ ಗಂಭೀರ

Views: 283
ಕನ್ನಡ ಕರಾವಳಿ ಸುದ್ದಿ: ಕುಟುಂಬಸ್ಥರ ವಿರೋಧದ ನಡುವೆ ತಾನು ಪ್ರೀತಿಸಿದ ಹುಡುಗನ ಜೊತೆ ವಿವಾಹವಾದ ಮಗಳ ಮೇಲೆ ಆಕೆಯ ತಂದೆಯೇ ಗುಂಡು ಹಾರಿಸಿ ಹತ್ಯೆ ನಡೆಸಿದ ಘಟನೆ ಮಹಾರಾಷ್ಟ್ರದ ಜಲಗಾಂವ್ ನಲ್ಲಿ ನಡೆದಿದೆ.
ಸಿಆರ್‌ಪಿಎಫ್‌ನ ನಿವೃತ್ತ ಪಿಎಸ್‌ಐ ಕಿರಣ್ ಮಾಂಗಲೆ ಮಗಳನ್ನು ಕೊಂದವರು. ವಿವಾಹ ಸಮಾರಂಭಕ್ಕೆ ಬಂದಿದ್ದ ಅಳಿಯ ಮತ್ತು ಮಗಳ ಮೇಲೆ ನಿವೃತ್ತ ಅಧಿಕಾರಿ ಗುಂಡು ಹಾರಿಸಿದ್ದಾರೆ. ಪುತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅಳಿಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಂದೆಯಿಂದ ಕೊಲೆಗೀಡಾದ ಮಗಳು ತೃಪ್ತಿ ಮಾಂಗಲೆ ಮತ್ತು ಅವಿನಾಶ್ ವಾಫ್ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ವಿವಾಹಕ್ಕೆ ಕುಟುಂಬಸ್ಥರ ವಿರೋಧವಿತ್ತು. ವಿರೋಧದ ನಡುವೆಯೂ ಇಬ್ಬರೂ ವಿವಾಹವಾಗಿ ಪುಣೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಅವಿನಾಶ್ ಅವರ ಸಂಬಂಧಿ ಮದುವೆಗಾಗಿ ಚೋಪ್ಲಾಕ್ಕೆ ಆಗಮಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ತೃಪ್ತಿ ಅವರ ತಂದೆ ಪಿಸ್ತೂಲು ಸಮೇತ ಮದುವೆಗೆ ಆಗಮಿಸಿದ್ದಾರೆ.
ಮದುವೆ ಮನೆಯಲ್ಲೇ ಮಗಳು ಮತ್ತು ಅಳಿಯನ ಮೇಲೆ ಗುಂಡು ಹಾರಿಸಿದ್ದಾರೆ. ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅವಿನಾಶ್ ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಮಹಿಳೆ ಕೂಡ ಗಾಯಗೊಂಡಿದ್ದಾಗಿ ವರದಿಯಾಗಿದೆ.