ಬೇರೆ ಮನೆ ಮಾಡದಿದ್ದಕ್ಕೆ ಕೋಪಗೊಂಡು ತವರು ಮನೆಗೆ ಹೋದ ಸೊಸೆ :ಅತ್ತೆ-ಮಾವ ಆತ್ಮಹತ್ಯೆ

Views: 159
ಬೆಂಗಳೂರು: ಬೇರೆ ಮನೆ ಮಾಡದಿದ್ದಕ್ಕೆ ಕೋಪಗೊಂಡು ಸೊಸೆ ತವರು ಮನೆ ಮನೆಯಲ್ಲಿ ಸೇರಿಕೊಂಡಿದ್ದಾಳೆ. ಸೊಸೆ ಮನೆ ಬಿಟ್ಟು ಹೋಗಿದ್ದರಿಂದ ಮನನೊಂದ ಅತ್ತೆ-ಮಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಳೆ ಬೈಯ್ಯಪ್ಪನಹಳ್ಳಿ ನಿವಾಸಿಗಳಾದ ಚಂದ್ರಶೇಖರ್(56) ಮತ್ತು ಶಾರದಾ(46) ಆತ್ಮಹತ್ಯೆಗೆ ಶರಣಾದ ದಂಪತಿ.
ಮೊದಲನೇ ಮಗ ಸೂರ್ಯಪ್ರಶಾಂತ್‌ಗೆ ಮದುವೆ ಮಾಡಿದ್ದು, ಎಲ್ಲರೂ ಒಟ್ಟಾಗಿ ವಾಸವಿದ್ದರು. ಮನೆಯಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆ ಮನಸ್ತಾಪವಾಗಿ ಜಗಳವಾಗಿದ್ದು, ಸೊಸೆ ಬೇರೆ ಮನೆ ಮಾಡುವಂತೆ ಪತಿ ಸೂರ್ಯಪ್ರಶಾಂತ್‌ಗೆ ಪೀಡಿಸುತ್ತಿದ್ದರು. ಬೇರೆ ಮನೆ ಮಾಡದಿದ್ದಕ್ಕೆ ಕೋಪಗೊಂಡು ಸೊಸೆ ತವರು ಮನೆ ಸೇರಿಕೊಂಡಿದ್ದಾರೆ.
ಇದರಿಂದಾಗಿ ಚಂದ್ರಶೇಖರ್ ದಂಪತಿ ಹಾಗೂ ಮಗ ಸೂರ್ಯಪ್ರಶಾಂತ್ ರಾಜಿ ಪಂಚಾಯ್ತಿ ಮಾಡಿದರೂ ಸೊಸೆ ಮನೆಗೆ ಬರಲು ಒಪ್ಪಿಲ್ಲ. ಇದರಿಂದ ದಂಪತಿ ಹಾಗೂ ಮಗ ನೊಂದುಕೊಂಡಿದ್ದಾರೆ.
ಸೊಸೆ ಮನೆಗೆ ವಾಪಸ್ ಬಾರದಿದ್ದ ಕಾರಣ ನೊಂದ ದಂಪತಿ ನಿನ್ನೆ ಸಂಜೆ ಮನೆಯಲ್ಲಿದ್ದ ಕಿರಿಯ ಮಗ ಶ್ರೇಯಸ್‌ಗೆ ಮೊಟ್ಟೆ ತರುವಂತೆ ಅಂಗಡಿ ಕಳುಹಿಸಿ, ಇತ್ತ ದಂಪತಿ ರೂಮಿನಲ್ಲಿ ಹಗ್ಗದಿಂದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ರೇಯಸ್ ಮನೆಗೆ ಬಂದು ಅಮ್ಮ ಅಪ್ಪ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿ ರೂಮಿನ ಬಾಗಿಲು ಹಾಕಿರುವುದು ಕಂಡು ಬಾಗಿಲು ತಟ್ಟಿದ್ದಾನೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಗೊಂಡು ಆತ ಸಮೀಪ ವಾಸವಾಗಿರುವ ಸೋದರ ಮಾವನ ಮನೆಗೆ ಹೋಗಿ ಅವರನ್ನು ಕರೆದುಕೊಂಡು ಬಂದಿದ್ದಾನೆ.
ಸೋದರ ಮಾವ ರೂಮಿನ ಬಾಗಿಲು ಬಡಿದರೂ ತೆಗೆಯದಿದ್ದಾಗ ಬಾಗಿಲು ಹೊಡೆದು ನೋಡಿದಾಗ ಅತ್ತೆ-ಮಾವ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸುದ್ದಿ ತಿಳಿದ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.






