ಬಾರ್ಕೂರು ವೀರಭದ್ರ ದೇವಸ್ಥಾನದಲ್ಲಿ ಶಂಕರಾಚಾರ್ಯ ಜನ್ಮದಿನೋತ್ಸವ ಕಾರ್ಯಕ್ರಮ

Views: 227
ಬ್ರಹ್ಮಾವರ :ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಮತಿ ಪೂರ್ಣಿಮಾ ಮತ್ತು ಭಾಸ್ಕರ್ ಶೆಟ್ಟಿಗಾರ್ ಅಸೋಡು ಇವರ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಶಂಕರಾಚಾರ್ಯ ಜನ್ಮದಿನೋತ್ಸವದ ಅಂಗವಾಗಿ ಮೇ 9ರಿಂದ ಆರಂಭಗೊಂಡ ತತ್ವ ಪ್ರಸಾರ ಅಭಿಯಾನದಲ್ಲಿ ಉಡುಪಿ ಜಿಲ್ಲಾ ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ ಸಮಿತಿಯ ಸಂಘಟನಾ ಸಮಿತಿ ಕಾರ್ಯದರ್ಶಿ ಶ್ರೀಮತಿ ಸವಿತಾ ಎರ್ಮಾಳು ಅವರು ಮಾತನಾಡಿದರು.
8ನೇ ಶತಮಾನದವರೆಗೆ ಹಿಂದೂ ಧರ್ಮವೆಂಬ ಪವಿತ್ರ ಸರೋವರದಲ್ಲಿ ತುಂಬಿಸಿ ಇಟ್ಟಿದ್ದ ಬೇಡವಾದ ಅರ್ಥವಿಲ್ಲದ ಅಸಂಬದ್ಧ ಧಾರ್ಮಿಕ ಆಚರಣೆ, ಕಂದಾಚಾರ, ಮೂಡನಂಬಿಕೆ, ವಾಮಾಚಾರ ಕೆಲಸಕ್ಕೆ ಬಾರದ ಮಂತ್ರ ತಂತ್ರ, ದೇವತಾ ಪೂಜೆ, ಉಪಾಸನೆ ಮುಂತಾದ ಕಸ ಕಡ್ಡಿ ಕಲ್ಲು ಮಣ್ಣು ಗಿಡ-ಗೆಂಟೆ ಕೊಳಕನ್ನು ಕಿತ್ತೆಸೆದು, ಅದನ್ನು ಸ್ವಚ್ಛ ಸುಂದರ ತಿಳಿ ನೀರ ಪವಿತ್ರ ಸರೋವರವನ್ನಾಗಿಸಿದ ಕೀರ್ತಿ ಶಂಕರದ್ದಾಗಿರುತ್ತದೆ.
ಶಂಕರರಿಂದಾಗಿ ಹಿಂದೂ ಧರ್ಮವನ್ನು ತೊರೆದು ಹೋದ ಜನ ಮರಳಿ ಹಿಂದೂ ಧರ್ಮಕ್ಕೆ ಬಂದರು. ಹಿಂದೂ ಧರ್ಮದ ಆಚಾರ ವಿಚಾರ ಪೂಜಾ ಕ್ರಮ ಆಹಾರ ಕ್ರಮವನ್ನು ಶಂಕರರು ಸುಧಾರಿಸಿದರು. ಇದರಿಂದಾಗಿ ಹಿಂದೂ ಧರ್ಮ ವ್ಯಾಪಕವಾಗಿ ಬಲಿಷ್ಠವಾಗಿ ಬೆಳೆಯಲು ಸಹಕಾರಿಯಾಯಿತು.

ಶಂಕರಾಚಾರ್ಯರು ಭಾರತವನ್ನು ಮೂರು ಬಾರಿ ಕಾಲ್ನಡಿಗೆಯಲ್ಲಿ ಸಂಚರಿಸಿದರು. ಮರಳುಗಾಡಿನಲ್ಲಿ ಕಣಿವೆ ಕೊರಕಲುಗಳಲ್ಲಿ, ದಟ್ಟಕಾಡುಗಳಲ್ಲಿ, ದುಷ್ಟ ಮೃಗಗಳಿಂದ ತಪ್ಪಿಸಿಕೊಂಡು, ಮುಳ್ಳು ಪೊದೆಗಳ ದಾಟಿ, ದೊಡ್ಡ ನದಿಗಳನ್ನು ಈಜಿ, ಬೆಟ್ಟ ಗುಡ್ಡಗಳ ಹತ್ತಿಳಿದು ಸಾಗಿದರು. ಭಾರತದ ಸಾವಿರಾರು ಸ್ಥಳಗಳನ್ನು ದರ್ಶಿಸಿದರು. ದೇವಸ್ಥಾನಗಳಲ್ಲಿ, ಗವಿಗಳಲ್ಲಿ, ಕಲ್ಲು ಮಂಟಪಗಳಲ್ಲಿ, ಹುಲ್ಲು ಜೋಪಡಿಗಳಲ್ಲಿ, ಮರದ ಬುಡದಲ್ಲಿ, ನದಿಯ ದಡದಲ್ಲಿ, ಬೆಟ್ಟದ ಅಡಿಯಲ್ಲಿ, ಸಮುದ್ರದ ತಟದಲ್ಲಿ ವಿಶ್ರಮಿಸಿದರು. ಎಲ್ಲೂ ಮೂರು ರಾತ್ರಿಗಿಂತ ಹೆಚ್ಚಾಗಿ ನಿಲ್ಲದೆ ನಿರಂತರವಾಗಿ ಯಾವುದೇ ರಸ್ತೆ ಮಾರ್ಗಸೂಚಿ ಇಲ್ಲದೆ ಭಾರತದಾದ್ಯಂತ ಸಂಚರಿಸಿದರು.
ನಿತ್ಯ ಪೂಜೆಗಾಗಿ ಸರಸ್ವತಿ ನದಿಯ ಸೂರ್ಯಶಿಲೆ, ಸುವರ್ಣಮುಖಿ ನದಿಯ ಅಂಬಿಕಾ ಶಿಲೆ, ಶೋಣಭದ್ರಾ ನದಿಯ ಕೆಂಪು ಗಣಪತಿ ಶಿಲೆ, ನರ್ಮದಾ ನದಿಯ ಬಾಣಲಿಂಗ ಶಿಲೆ, ಗಂಡಕಿ ನದಿಯ ಸಾಲಿಗ್ರಾಮ ಕಪ್ಪು ಶಿಲೆ ಹೊಂದಿದ್ದರು. , ಸಂಚಾರ ಕಾಲದಲ್ಲಿ ಗ್ರಾಮದ ಜನರು ಶಂಕರರನ್ನು ಆದರಿಸಿ ಗೌರವಿಸುತ್ತಿದ್ದರು. ಶಂಕರರು ಹಿಂದೂ ಧರ್ಮದ ಮಹತ್ವ ತಿಳಿಸಿ ಹೇಳುತ್ತಿದ್ದರು. ನಿದ್ರಾ ಆಹಾರವನ್ನು ಲೆಕ್ಕಿಸದೆ ರಾತ್ರಿ ಬೆಳದಿಂಗಳಲ್ಲಿ ಸಂಚರಿಸುತ್ತಿದ್ದರು, ಕತ್ತಲ ಕಾಡಿನಲ್ಲಿ ವಿಶ್ರಮಿಸುತ್ತಿದ್ದರು.

ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸುವುದು ಬಹಳ ಕಷ್ಟವಾಗುತ್ತಿತ್ತು. ಆಹಾರವು ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿರಲಿಲ್ಲ, ಗುಣಮಟ್ಟದ ಆಹಾರ ತೃಪ್ತಿಕರವಾಗಿ ಸಿಗುತ್ತಿರಲಿಲ್ಲ, ಕುಡಿಯುವ ನೀರು ವ್ಯತ್ಯಾಸವಾಗುತ್ತಿತ್ತು, ನೀರು ಸಂಗ್ರಹಿಸುವುದು, ಸಂಚಾರದಲ್ಲಿ ಸಾಗಿಸುವುದಕ್ಕೆ ಸಾಮಾಗ್ರಿ ಇರುತ್ತಿರಲಿಲ್ಲ, ಕತ್ತಲು ಆವರಿಸುತ್ತಿತ್ತು, ಬೆಳಕಿನ ವ್ಯವಸ್ಥೆ ಇಲ್ಲದೆ ಬೆಳಗಾಗುವವರೆಗೂ ಪರಿತಪಿಸಬೇಕಾಗಿತ್ತು, ವ್ಯಾಪಕವಾಗಿ ಬೆಳೆದು ನಿಂತ ಬೌದ್ಧರನ್ನು ಎದುರಿಸುವುದು ಸವಾಲಿನ ಕೆಲಸವಾಗಿತ್ತು, ಹಿಂದೂ ಧರ್ಮದ ದುಃಸ್ಥಿತಿ ಮನಸ್ಸನ್ನು ಹಿಂಡುತ್ತಿತ್ತು. ತಾವು ರಚಿಸಿದ ಗ್ರಂಥಗಳ ರಕ್ಷಣೆ ಮಾಡುವುದು ಕಷ್ಟಕರವಾಗಿತ್ತು, ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹರಿತ ಆಯುಧ ಹೊಂದುವಂತಿಲ್ಲ, ರಾತ್ರಿ ಚಳಿ ಗಾಳಿಯಿಂದ ರಕ್ಷಿಸಲು ಉತ್ತಮ ಹಾಸಿಗೆ ಹೊದಿಕೆ ಹೊಂದುವಂತಿಲ್ಲ. ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆಯಾಗಿತ್ತು.
ಬಡಗೃಹಿಣಿಯ ಬಡತನವನ್ನು ದೂರ ಮಾಡಿದರು. ಹಿಂದೂ ಧರ್ಮದ ಉಳಿವಿಗಾಗಿ ನಾಲ್ಕು ದಿಕ್ಕಿನಲ್ಲಿ ನಾಲ್ಕು ಪೀಠ ಸ್ಥಾಪನೆ ಮಾಡಿದರು. . . ಭಾರತ ದೇಶ ಕಂಡ ಅಜರಾಮರ ವ್ಯಕ್ತಿ ಶಂಕರಾಚಾರ್ಯರು ಎಂದರು.
ದೇವಳದ ಆಡಳಿತ ಮೊಕ್ತೇಸರರಾದ ಡಾ.ಸಿ.ಜಯರಾಮ್ ಶೆಟ್ಟಿಗಾರ್ ಸ್ವಾಗತಿಸಿದರು. ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ಶ್ರೀನಿವಾಸ ಶೆಟ್ಟಿಗಾರ್, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್.ಎ ಗೋಪಾಲ್, ಕುಮಾರ ಸ್ವಾಮಿ ಬಿ.ಆರ್,ದೇವಳದ ಆಡಳಿತ ಮಂಡಳಿಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.






