ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ:ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಧಾರಾಕಾರ ಮಳೆ, ಅಲರ್ಟ್ ಘೋಷಣೆ!
Views: 195
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಮತ್ತು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪರಿಣಾಮ ರಾಜ್ಯದ ಕೆಲವೆಡೆ ಧಾರಾಕಾರ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಉಂಟಾಗಿರುವ ಚಂಡಮಾರುತ ಮತ್ತು ಅರಬ್ಬಿ ಸುಮುದ್ರದಲ್ಲಿನ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ 10 ಜಿಲ್ಲೆಗಳಿಗೆ ಅಕ್ಟೋಬರ್ 17 ರಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಅಕ್ಟೋಬರ್ 17 ರ ಬೆಳಗ್ಗೆಯಿಂದ 18 ರ ಬೆಳಗಿನ ಜಾವದವರೆಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಕೊಡಲಾಗಿದೆ.
ಅಲ್ಲದೆ ಪ್ರತ್ಯೇಕವಾಗಿ ಅಕ್ಟೋಬರ್ 15 ರಿಂದ 17ರ ವರೆಗೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉಳಿದಂತೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಅಕ್ಟೋಬರ್ 17 ರಿಂದ 18ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಿಗೆ ಸಹ ಅಕ್ಟೋಬರ್ 17 ರಂದು ಯೆಲ್ಲೋ ಅಲರ್ಟ್ ಇರಲಿದೆ.
“ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಉಂಟಾಗಿರುವ ವಾಯು ಚಂಡಮಾರುತವು ಈಗ ಉತ್ತರದ ಒಳಭಾಗದ ತಮಿಳುನಾಡಿನ ಮೇಲೆ ನೆಲೆಗೊಂಡಿದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ. ವರೆಗೆ ಎತ್ತರದಲ್ಲಿದೆ ಮತ್ತು ನೈಋತ್ಯಕ್ಕೆ ವಾಲುತ್ತದೆ. ಇನ್ನೊಂದು ಟ್ರಫ್ ಪೂರ್ವ ಪಕ್ಕದ ಪಶ್ಚಿಮ ಮಧ್ಯ ಅರೇಬಿಯನ್ ಸಮುದ್ರದ ಮೇಲಿದ್ದು ದಕ್ಷಿಣ ಕೇರಳದಿಂದ ಕೊಮೊರಿನ್ ಪ್ರದೇಶದವರೆಗೆ ಸಾಗಲಿದೆ. ಚಂಡಮಾರುತ ಮತ್ತು ವಾಯುಭಾರ ಕುಸಿತಗಳ ಪರಿಣಾಮ ಮೂರು ದಿನದ ನಂತರ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ” ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿದ್ದಾರೆ.