ಪುತ್ರ ವೃದ್ಧಾಶ್ರಮ ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ

Views: 178
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ವೃದ್ಧಾಶ್ರಮ ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಜೀವ ಕಳೆದುಕೊಂಡಿದ್ದಾರೆ.
ಬೆಂಗಳೂರು ಜೆಪಿ ನಗರದ 8ನೇ ಹಂತದ ವೃದ್ಧಾಶ್ರಮದಲ್ಲಿ ಈ ಘಟನೆ ನಡೆದಿದೆ.
ಕೃಷ್ಣ ಮೂರ್ತಿ (81) ಇವರ ಪತ್ನಿ ರಾಧ (74) ನೇಣು ಬಿಗಿದುಕೊಂಡು ಸಾವಿಗೆ ಶರಣಾದ ದಂಪತಿ.
ತಂದೆ, ತಾಯಿಯನ್ನು ಕಳೆದ 1 ತಿಂಗಳ ಹಿಂದೆಯಷ್ಟೇ ಮಗ ವೃದ್ಧಾಶ್ರಮಕ್ಕೆ ಸೇರಿಸಿದ್ದನು. ಮನೆಯಲ್ಲಿ ಸೊಸೆ ಮಾಡಿದ ಅಡುಗೆ ಚೆನ್ನಾಗಿರಲ್ಲ ಎನ್ನುವ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ತಂದೆ, ತಾಯಿ ಇಬ್ಬರನ್ನು ಮಗ ವೃದ್ಧಾಶ್ರಮಕ್ಕೆ ಸೇರಿಸಿದ್ದನು. ಸೋಮವಾರ ರಾತ್ರಿಯೇ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಆದರೆ ಮಂಗಳವಾರ ಬೆಳಗಿನ ಜಾವ ಬಾಗಿಲು ತೆಗೆದಿರಲಿಲ್ಲ. ಇದರಿಂದ ಅನುಮಾನಗೊಂಡ ಆಶ್ರಮದವರು ಬಾಗಿಲು ತೆಗೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ವೃದ್ಧ ದಂಪತಿ ಸೊಸೆ ಜತೆ ಹೊಂದಾಣಿಕೆ ಇರದ ಕಾರಣ ಬೇರೆ ಮನೆ ಮಾಡಿಕೊಡಲು ಮಗನಿಗೆ ಕೇಳಿದ್ದರು. ಹಿನ್ನೆಲೆಯಲ್ಲಿ 2021 ರಲ್ಲಿಬ್ಯಾಟರಾಯನಪುರ ವೃದ್ಧಾಶ್ರಮಕ್ಕೆ ತಂದೆ ತಾಯಿಯನ್ನು ಸೇರಿಸಿದ್ದನು. ಬಳಿಕ 2023ರಲ್ಲಿ ವಾಪಸ್ ಮನೆಗೆ ತಂದೆ, ತಾಯಿಯನ್ನು ಕರೆದುಕೊಂಡು ಬರಲಾಗಿತ್ತು. ಆದರೆ ಮತ್ತೆ ಮನೆಯಲ್ಲಿ ಹೊಂದಾಣಿಕೆ ಆಗಲಿಲ್ಲ. ಹೀಗಾಗಿ ಕಳೆದ ತಿಂಗಳು ಮತ್ತೆ ಬನಶಂಕರಿ ವೃದ್ಧಾಶ್ರಮಕ್ಕೆ ಸೇರಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಇಬ್ಬರೂ ಊಟ ಮಾಡಿ ಮಲಗಲು ಹೋಗಿದ್ದರು. ಬೆಳಗ್ಗೆ ವೃದ್ಧ ದಂಪತಿ ನೇಣು ಬಿಗಿದು ಸಾವಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆದರೆ, ಟಿವಿ ನೋಡುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ವೃದ್ಧಾಶ್ರಮದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.