ಕುಂದಾಪುರ: ವಂಡ್ಸೆಯಲ್ಲಿ ಅಂಗಡಿಗೆ ನುಗ್ಗಿ ಇಬ್ಬರ ಮೇಲೆ ಹಲ್ಲೆ
Views: 189
ಕನ್ನಡ ಕರಾವಳಿ ಸುದ್ದಿ: ಹಣಕಾಸು ವಿಚಾರಕ್ಕೆ ಅಂಗಡಿಗೆ ನುಗ್ಗಿದ ವ್ಯಕ್ತಿಯೊಬ್ಬರು ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರ್ಚ್ 10ರಂದು ಸಂಜೆ ಸುಮಾರು 5 ಗಂಟೆಯ ವೇಳೆ, ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ಶೇಷು ಶೆಟ್ಟಿ (65) ಅವರು ವಂಡ್ಸೆ ಗ್ರಾಮದ ಐತಾಳ್ ಕ್ಲಿನಿಕ್ ಸಮೀಪ ನಡೆಸುತ್ತಿರುವ ಅಡಿಕೆ ಹಾಗೂ ಕೃಷಿ ಸಂಬಂಧಿತ ವಾಣಿಜ್ಯ ಬೆಳೆ ಮಾರಾಟದ ಅಂಗಡಿಗೆ ಆರೋಪಿ ಪ್ರಕಾಶ್ ಎಂ.ಎಸ್. ಎಂಬಾತ ತನ್ನ ಕಾರಿನಲ್ಲಿ ಬಂದು ನಿಲ್ಲಿಸಿ ಅಂಗಡಿಗೆ ಪ್ರವೇಶಿಸಿದ್ದಾನೆ ಎನ್ನಲಾಗಿದೆ.
ಅಲ್ಲಿ ಹಣಕಾಸಿನ ವಿಚಾರವನ್ನು ಮುಂದಿಟ್ಟುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಶೇಷು ಶೆಟ್ಟಿಯವರ ಕೊರಳಪಟ್ಟಿ ಹಿಡಿದು ಕೆನ್ನೆಗೆ ಹೊಡೆದು, ಎದೆ ಮೇಲೆ ಗುದ್ದಿ ನೆಲಕ್ಕೆ ಕೆಡವಿ ಕಾಲಿನಿಂದ ತುಳಿದು ಅಲ್ಲಿದ್ದ ಮರದ ಕೋಲಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಘಟನೆಯನ್ನು ತಡೆಯಲು ಮುಂದಾದ ಪಿರ್ಯಾದಿದಾರರ ತಮ್ಮ ಸೂಲಿಯಣ್ಣ ಶೆಟ್ಟಿ ಅವರ ಮೇಲೂ ಆರೋಪಿ ಹಲ್ಲೆ ನಡೆಸಿ ಕೈಯಿಂದ ಹೊಡೆದು ನೆಲಕ್ಕೆ ದೂಡಿ ಕಾಲಿನಿಂದ ತುಳಿದಿರುವುದಾಗಿ ತಿಳಿದುಬಂದಿದೆ.
ಘಟನೆಯನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ನೀಡಲಾದ ದೂರಿನ ಆಧಾರದಲ್ಲಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






