ಸಾಂಸ್ಕೃತಿಕ
ನವರಾತ್ರಿಯಲ್ಲಿ ಮನೆ ಮನೆ ಬೆಳಗಿ ಶುಭ ಹಾರೈಸುವ ‘ಹೂವಿನ ಕೋಲು’ ತಂಡ
Views: 58
ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಕರಾವಳಿಯು ಯಕ್ಷ ಕಲೆಯ ತವರೂರು. ಇಲ್ಲಿ ವರ್ಷದ 6 ತಿಂಗಳು ವಿಪರೀತ ಮಳೆ ಇರುವುದರಿಂದ ವರ್ಷವಿಡೀ ಯಕ್ಷಗಾನದ ಬಯಲಾಟ ಇರುವುದಿಲ್ಲ ಮೇಳಗಳು ಮೇ ತಿಂಗಳಲ್ಲಿ ತಮ್ಮ ಪ್ರದರ್ಶನಗಳನ್ನು ಸ್ಥಗಿತಗೊಳಿಸಿ ಮತ್ತೆ ನವೆಂಬರ್ ತಿಂಗಳಲ್ಲಿ ಪುನಃ ಮೇಳದ ಪ್ರದರ್ಶನಕ್ಕೆ ತಿರುಗಾಟ ಆರಂಭಿಸುತ್ತಾರೆ.ಈ 6 ತಿಂಗಳುಗಳ ಕಾಲ ಮೇಳಗಳು ಇಲ್ಲದೇ ಇರುವುದರಿಂದ ಜೀವನ ನಿರ್ವಹಣೆ ಕಷ್ಟ ಈ ಸಂದರ್ಭದಲ್ಲಿ ಕಲಾವಿದರು ತಮ್ಮ ಜೀವನೋಪಾಯಕ್ಕಾಗಿ ತಾಳಮದ್ದಳೆ, ಚಿಕ್ಕಮೇಳ, ಹೂವಿನ ಕೋಲು ಆರಂಭಿಸಿರಬಹುದು.
ಕರಗಳೆರಡು ಮುಗಿದು ಶಿರಬಾಗಿ ಇಂದು
ಅಶ್ವಯುಜ ಶುದ್ದ ನವಮಿ ಬರಲೆಂದು
ಲೇಸಾಗಿ ಹರಸುವೆವು ಬಾಲಕರು ಬಂದು………..
ಎಂಬ ಯಕ್ಷಗಾನ ಹಾಡು ಊರಿನ ಪ್ರತಿ ಮನೆಯಿಂದಲೂ ಕೇಳಿ ಬಂದಾಗ ಅರೆ..! ಇದೇನು…? ಯಕ್ಷಗಾನ ಬಯಲಾಟ ಮೈದಾನದಲ್ಲಿ ನಡೆಯದೆ ಮನೆ ಮನೆಯಲ್ಲಿ ನಡೆಯುತ್ತಿದೆಯೇ..? ಎಂಬ ಸಣ್ಣ ಕುತೂಹಲ ಮೂಡದಿರದು.

ಹೂವಿನಕೋಲು…ಭತ್ತದ ತೆನೆಯ ಸಂಕೇತ..
ಯಕ್ಷಗಾನದ ಚಂಡೆ ಮತ್ತು ಕುಣಿತವನ್ನು ಹೊರತು ಪಡಿಸಿ ಉಳಿದೆಲ್ಲವೂ ಪ್ರದರ್ಶನದಲ್ಲಿದ್ದು, ಪೌರಾಣಿಕ ಪ್ರಸಂಗ ಕೃಷ್ಣ ಸತ್ಯಭಾಮೆ, ಬೀಷ್ಮ ಪರಶುರಾಮ, ಸುದನ್ವ, ಪ್ರಭಾವತಿ ಪ್ರಸಂಗದ ಆಯ್ದ ಜೋಡಿ ಸಂಭಾಷಣೆಯನ್ನು 30 ನಿಮಿಷದಲ್ಲಿ ಮನೆಯ ಚಾವಡಿಯಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ.
ಹೂವಿನ ಕೋಲು ಎಂದರೆ ಭತ್ತದ ತೆನೆಯ ಸಂಕೇತ ಎಂಬಂತೆ ಕೋಲಿಗೆ ಹೂವನ್ನು ಸುತ್ತಿಕೊಂಡೆ ಬರುತ್ತಾರೆ. ಇನ್ನೇನು ರೈತರು ಬೆಳೆದ ಭತ್ತದ ಫಸಲಿನ ಕಟಾವಿಗೆ ಹತ್ತಿರ ಬರುವ ಸಂದರ್ಭದಲ್ಲಿ ಮನೆಯೊಳಗೆ ಫಸಲಿನ ಜೊತೆಗೆ ಸುಖ, ಸಂಪತ್ತು, ಧನ, ಕನಕ, ವಸ್ತು, ವಾಹನ ಎಲ್ಲವೂ ನಿಮ್ಮದಾಗಲಿ ಎಂದು ಶುಭ ಹಾರೈಕೆಯೊಂದಿಕೆ ಭಾಗವತಿಗೆಯ ಪದ ಆರಂಭಿಸುತ್ತಾರೆ.
ಚಿಕ್ಕಮೇಳ ಪ್ರದರ್ಶನ ರಾತ್ರಿ ನಡೆದರೆ ಹೂವಿನ ಕೋಲಿನ ಪ್ರದರ್ಶನ ಮಾತ್ರ ಬೆಳಿಗ್ಗೆಯಿಂದ ಸೂರ್ಯ ಅಸ್ತಮದವರೆಗೂ ಸುಮಾರು 10 ರಿಂದ 15 ಮನೆಗಳಲ್ಲಿ ಪ್ರದರ್ಶನ ನೀಡಲಾಗುತ್ತಿದೆ. ಕಲಾವಿದರನ್ನು ಗೌರವದಿಂದ ಸ್ವಾಗತಿಸಿಕೊಳ್ಳುತ್ತಾರೆ. 30 ನಿಮಿಷಗಳ ಪ್ರದರ್ಶನಕ್ಕೆ 100 ರೂ ನಿಂದ 500 ರೂವರೆಗೂ ಅಂದರೆ ಅವರ ಇಚ್ಚಾನುಸಾರವಾಗಿ ಹಣ ನೀಡುತ್ತಾರೆ.
ಗಾಂಧಿ ಟೋಪಿ ಪ್ರಭಾವ ಹೂವಿನ ಕೋಲು ಪ್ರದರ್ಶನದಲ್ಲಿ ಯಾವುದೇ ನಿರ್ಧಿಷ್ಟ ಉಡುಗೆ ತೊಡುಗೆ ಬಗ್ಗೆ ನಿದರ್ಶನಗಳಿಲ್ಲ, ಆದರೆ, ಹಿಂದಿನಿಂದಲೂ ಅರ್ಥದಾರಿಗಳು ಗಾಂಧಿ ಟೋಪಿಯನ್ನು ಬಳಸುತ್ತಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಇಲ್ಲಿ ಗಾಂಧಿ ಹಾಗೂ ಟೋಪಿಯ ಮಹತ್ವವನ್ನು ತಿರುಗಾಟದಲ್ಲಿ ಸಾರಿದ್ದಾರೆ, ಒಂದರ್ಥದಲ್ಲಿ ನವರಾತ್ರಿಯ ಬಿಸಿಲಿನ ಝಳಕದ ರಕ್ಷಣೆಗಾಗಿ ಬಳಸಿರಬಹುದು ಎಂಬುವುದು ಬಲ್ಲವರ ಅಭಿಪ್ರಾಯ.







