ಚಿಕ್ಕಮಗಳೂರು ದತ್ತಮಾಲ ಅಭಿಯಾನ: ಎಲ್ಲೆಡೆ ಭದ್ರತೆ ಸೇರಿ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಜಿಲ್ಲಾಡಳಿತ ಸಿದ್ಧತೆ

Views: 0
ಚಿಕ್ಕಮಗಳೂರು: ಶ್ರೀರಾಮ ಸೇನೆ ನಡೆಸುತ್ತಿರುವ ದತ್ತಮಾಲಾ ಅಭಿಯಾನದ ಭಾಗವಾಗಿ ಭಾನುವಾರ ಶೋಭಾಯಾತ್ರೆ ನಡೆಯಲಿದ್ದು, ಭದ್ರತೆ ಸೇರಿ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಅಭಿಯಾನದ ಅಂತಿಮ ದಿನಾವಾದ ಭಾನುವಾರ ನಗರದ ಶಂಕರಮಠದಿಂದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ತನಕ ಶೋಭಾಯಾತ್ರೆ ನಡೆಯಲಿದೆ. ಬಳಿಕ ಮಾಲಾಧಾರಿಗಲು ಚಂದ್ರದ್ರೋಣ ಪರ್ವತ ಏರಿ ಇನಾಂ ದತ್ತಾತ್ರೇಯ ಪೀಠ(ಐ.ಡಿ. ಪೀಠ) ವ್ಯಾಪ್ತಿಯಲ್ಲಿ ಸತ್ಯ ದತ್ತವ್ರತ ಮತ್ತು ದತ್ತ ಹೋಮದಲ್ಲಿ ಭಾಗವಹಿಸಲಿದ್ದಾರೆ.
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಊಹಿಸಿದೆ. ಸೂಕ್ತ ಭದ್ರತೆ ಒದಗಿಸಲು ತಯಾರಿ ನಡೆಸಿದೆ.
ಇನ್ನೊಂದೆಡೆ ಕೈಮರದಿಂದ ಐ.ಡಿ. ಪೀಠದ ತನಕ ರಸ್ತೆಗಳನ್ನು ಸರಿಪಡಿಸಲಾಗಿದೆ. ರಸ್ತೆ ಬದಿಯಲ್ಲಿ ಇದ್ದ ಕೊರಕಲುಗಳಿಗೆ ಮಣ್ಣು ತುಂಬಿಸಲಾಗಿದೆ. ಪ್ರಪಾತಗಳು, ಅಪಾಯಕಾರಿ ತಿರುವುಗಳಿ ಇರುವ ಕಡೆ ತಡೆ ಕಂಬಗಳನ್ನು ಅಳವಡಿಸಲಾಗುತ್ತಿದೆ.
ವಾಹನ ನಿಲುಗಡೆ ವ್ಯವಸ್ಥೆ, ಸ್ವಚ್ಚತೆ, ಶೌಚಾಲಯಗಳ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಅಲ್ಲಲ್ಲಿ ದೊಡ್ಡ ಬ್ಯಾನರ್‌ಗಳನ್ನು ಹಾಕಿ ಸ್ವಚ್ಚತೆ ಕಾಪಾಡುವಂತೆ ಮನವಿ ಮಾಡಲಾಗಿದೆ. ಎಲ್ಲೆಡೆ ಸಿಸಿಟಿವಿ ಕ್ಯಾಮರಾ ಅಳವಡಿಸಿ ಕಣ್ಗಾವಲು ಇರಿಸಲಾಗಿದೆ.
ದತ್ತಮಾಲ ಅಭಿಯಾನಕ್ಕೆ ಭದ್ರತೆ ಒದಗಿಸಲು ಹೊರ ಜಿಲ್ಲೆಯ ಒಂದೂವರೆ ಸಾವಿರ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. 6 ಡಿವೈಎಸ್‌ಪಿ 20 ಇನ್‌ಸ್ಪೆಕ್ಟರ್‌ಗಳು 89 ಸಬ್ ಇನ್‌ಸ್ಪೆಕ್ಟರ್ 141 ಎಎಸ್‌ಐಗಳು 956 ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳು 250 ಗೃಹ ರಕ್ಷಕ ಸಿಬ್ಬಂದಿ 8 ಕೆಎಸ್ಆರ್‌ಪಿ ತುಕಡಿ ಮತ್ತು 12 ಸಶಸ್ತ್ರ ಮೀಸಲುಪಡೆ ತಕಡಿ ನಿಯೋಜಿಸಲಾಗಿದೆ. 80 ಸೆಕ್ಷನ್ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಪಾಯಿಂಟ್‌ಗಳ ಸೂಕ್ಷ್ಮತೆ ಆಧರಿಸಿ ಅಲ್ಲಿಗೆ ಎಷ್ಟು ಸಿಬ್ಬಂದಿ ನಿಯೋಜಿಸಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದರು.
ಜಿಲ್ಲೆಯ ಗಡಿಭಾಗ ನಗರ ಮತ್ತು ಗಿರಿಭಾಗ ಸೇರಿ ಒಟ್ಟು 26 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಜಿಲ್ಲೆಯಾದ್ಯಂತ 49 ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳನ್ನು ನೇಮಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಹೊರ ಜಿಲ್ಲೆಗಳಿಂದ ಬರುವ ವಾಹನಗಳ ತಪಾಸಣೆಗೆ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು ಇನ್ನೆರಡು ದಿನ ಜಿಲ್ಲೆಗೆ ಬರುವ ವಾಹನಗಳ ಮೇಲೆ ಪೊಲೀಸರು ನಿಗಾ ಇಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ದತ್ತಮಾಲಾ ಅಭಿಯಾನದ ಅಂಗವಾಗಿ ನ.4ರಿಂದ(ಶುಕ್ರವಾರ) ನ.6ರ ಬೆಳಿಗ್ಗೆ 10 ಗಂಟೆ ತನಕ ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿ ಐ.ಡಿ ಪೀಠ ಮಾಣಿಕ್ಯಧಾರಾ ಜಲಪಾತ ಗಾಳಿಕೆರೆ ಪ್ರವಾಸಿತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಶ್ರೀರಾಮ ಸೇನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ದಟ್ಟಣೆ ಉಂಟಾಗುವ ಕಾರಣಕ್ಕೆ ಬೇರೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಶೋಭಾಯಾತ್ರೆ ನಡೆಯಲಿರುವ ನ.5ರಂದು ನಗರದಲ್ಲಿ ಭಾರಿ ವಾಹನಗಳ ಸಂಚಾರದ ಮಾರ್ಗ ಬದಲಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕಡೂರು ಕಡೆಯಿಂದ ಬಂದು ಮೂಡಿಗೆರೆ ಕಡೆಗೆ ಹೋಗುವ ಭಾರಿ ವಾಹನಗಳು ಎಐಟಿ ವೃತ್ತ ಬೈಪಾಸ್ ಪೈ ಸರ್ಕಲ್ ಹಿರೇಮಗಳೂರು ಕೈಗಾರಿಕಾ ಪ್ರದೇಶ ರಾಮ್‌ಪುರ ಮೂಲಕ ಸಂಚರಿಸಬೇಕು. ಮೂಡಿಗೆರೆ ಕಡೆಯಿಂದ ಕಡೂರು ಕಡೆಗೆ ಹೋಗುವ ವಾಹನಗಳು ಇದೇ ಮಾರ್ಗದಲ್ಲಿ ಸಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 6ರಿಂದ ಸಂಜೆ 5 ಗಂಟೆ ತನಕ ಬಸವನಹಳ್ಳಿ ಮುಖ್ಯ ರಸ್ತೆ ಮತ್ತು ಎಂ.ಜಿ. ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಈ ಎರಡೂ ರಸ್ತೆಯಲ್ಲಿ ಸಾಗಬೇಕಾದ ವಾಹನಗಳು ರತ್ನಗಿರಿ ರಸ್ತೆ ಐ.ಜಿ.ರಸ್ತೆ ಮತ್ತು ಅಂಬೇಡ್ಕರ್ ರಸ್ತೆಯಲ್ಲಿ ಸಾಗಬೇಕು ಎಂದುವಿವರಿಸಿದ್ದಾರೆ.






