ಚನ್ನಪಟ್ಟಣ ಉಪಚುನಾವಣೆ: ಪಕ್ಷೇತರನಾಗಿ ಸ್ಪರ್ಧೆ ಯೋಗೇಶ್ವರ್, ಗೊಂದಲಕ್ಕೆ ಇಂದು ತೆರೆ?

Views: 98
ರಾಮನಗರ: ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಗೊಂದಲಕ್ಕೆ ಇಂದು ಬಿಜೆಪಿ ಹೈಕಮಾಂಡ್ ತೆರೆ ಎಳೆಯುವ ಸಾಧ್ಯತೆಯಿದೆ
ದೆಹಲಿಯಲ್ಲಿ ಚನ್ನಪಟ್ಟಣ ಉಪಚುನಾವಣೆ ಮೈತ್ರಿ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಸಭೆ ನಡೆಯಲಿದೆ. ಅಧ್ಯಕ್ಷ ಜಿ.ಪಿ.ನಡ್ಡಾ ನೇತೃತ್ವದಲ್ಲಿ ನಡೆಯುವ ಸಭೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.
ಉಪಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಸ್ಪರ್ಧೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸಮಾವೇಶ ನಡೆಸಲು ಸಿಪಿವೈ ಮುಂದಾಗಿದ್ದರು. ಸಿಪಿವೈ ಬಂಡಾಯಕ್ಕೂ ಮುನ್ನ ಎಚ್ಚೆತ್ತ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ಸೂಚನೆ ನೀಡಿದೆ.
ಸಿಪಿವೈಗೆ ಟಿಕೆಟ್ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಠಕ್ಕರ್ ಕೊಡಲು ಬಿಜೆಪಿ ಹೈಕಮಾಂಡ್ ತಂತ್ರಗಾರಿಕೆ ನಡೆಸಿದೆ ಎನ್ನಲಾಗಿದೆ. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಕೆಲ ಷರತ್ತುಗಳ ಮೇಲೆ ಸಿಪಿವೈಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ಉಪಚುನಾವಣೆಯಲ್ಲಿ ಸಿಪಿವೈ, ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.
ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಉಪಚುನಾವಣೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಪಕ್ಷೇತರನಾಗಿ ಮತ್ತೆ ಗೆದ್ದು ಎನ್ಡಿಎ ಭಾಗವಾಗುತ್ತೇನೆ. ಏನೇನು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಮುಂದೆ ನೋಡೋಣ ಎಂದು ತಿಳಿಸಿದರು.
ನನ್ನ ತಾಲೂಕಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಯಾವುದೇ ಚಿನ್ಹೆಯ ಅಡಿ ನಿಂತರೂ ಗೆಲ್ಲಿಸುತ್ತಾರೆ. ಕ್ಷೇತ್ರದ ಸಮಾನ ಮನಸ್ಕ ವೇದಿಕೆಯಿಂದಲೂ ಸ್ಪರ್ಧೆಗೆ ಒತ್ತಾಯ ಇದೆ ಎಂದರು.
ನಾನು ಕಾಂಗ್ರೆಸ್ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ. ಯಾರೂ ನನ್ನನ್ನು ಮಾತನಾಡಿಸಲಿಲ್ಲ. ಡಿಕೆಶಿ ಅವರು ಏನೇನೋ ಮಾತನಾಡುತ್ತಾರೆ. ಅದು ಅವರ ರಾಜಕೀಯ ತಂತ್ರಗಾರಿಕೆ. ಅವರಿಗೆ ಯಾವಾಗ ಏನು ಮಾತಾಡಬೇಕು ಅಂತ ಗೊತ್ತಿದೆ ಎಂದು ಹೇಳಿದರು.
ನನಗೂ ಕುಮಾರಸ್ವಾಮಿಯವರಿಗೂ ಭಿನ್ನಾಭಿಪ್ರಾಯ ಏನಿದೆ? ನಮ್ಮ ಮಧ್ಯೆ ಬಿರುಕು ಮೂಡಿಸುವ ಪ್ರಯತ್ನವನ್ನು ಡಿಕೆಶಿ ಮಾಡ್ತಿದ್ದಾರೆ. ಕುಮಾರಸ್ವಾಮಿ ಅವರು ಮನಸ್ಸು ಬದಲಾಯಿಸಬಹುದು. ಕುಮಾರಸ್ವಾಮಿ ಒಪ್ಪದಿದ್ದರೆ ಮುಂದಿನ ದಾರಿ ನೋಡೋಣ ಎಂದು ತಿಳಿಸಿದರು.






