ಚಂದ್ರಯಾನ- 3 ಮತ್ತೊಂದು ಯಶಸ್ಸು ಗುರಿಯ ಕಡೆಗೆ ಪಯಣ

Views: 0
ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ- 3 ಪಯಣ ಮುಕ್ಕಾಲು ಪಾಲು ಯಶಸ್ವಿಯಾಗಿದೆ.
ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್ ಲೂನಾರ್ ಕಕ್ಷೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಸೇರಿಸಿದ್ದು, ಈಗಾಗಲೇ ತನ್ನ ಗುರಿಯ ಕಡೆಗೆ ಪಯಣ ಬೆಳೆಸಿದೆ.
ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀ ಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಉಡಾವಣೆಗೊಂಡಿತು. ನೌಕೆ ಇಷ್ಟು ದಿನ ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿತ್ತು. ಇದೀಗ ಭೂಮಿಯ ಕಕ್ಷೆಯಲ್ಲಿ ಐದು ಬಾರಿ ಪೂರ್ಣ ಪ್ರದಕ್ಷಿಣೆ ಹಾಕಿ ಚಂದ್ರನ ಕಕ್ಷೆ ಕಡೆಗೆ ಯಶಸ್ವಿಯಾಗಿ ಸೋಮವಾರ ಮಧ್ಯರಾತ್ರಿಯ ವೇಳೆಗೆ ಜಿಗಿದು ಸಾಗುತ್ತಿದೆ.ಭಾರತೀಯರ ಕನಸು ಸಾಕಾರಗೊಳ್ಳಲು ಇನ್ನೂ ಕೆಲವೇ ದಿನಗಳು ಉಳಿದಿದೆ.
ಸುಮಾರು 15 ದಿನಗಳ ಕಾಲ ಭೂ ಕಕ್ಷೆಯಲ್ಲಿ ನಿರ್ವಾತದಲ್ಲಿ ಓಡಾಡುತ್ತಿದ್ದ ನೌಕೆಯ ‘ಟ್ರಾನ್ಸ್ ಇಂಜೆಕ್ಷನ್’ ಸಕ್ಸಸ್ ಆಗಿದೆ ಎಂದು ಇಸ್ರೋ ಘೋಷಿಸಿದೆ.
ಎಲ್ಲವೂ ಯೋಜಿತ ರೀತಿಯಲ್ಲಿ ನಡೆದರೆ ಆಗಸ್ಟ್ 23ರ ಸಂಜೆ 5:47ಕ್ಕೆ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ.
‘ಟ್ರಾನ್ಸ್ ಇಂಜೆಕ್ಷನ್’ ಎಂದರೇನು?
ಭೂಮಿಯಿಂದ ಹೊರಟ ನೌಕೆ ನಮ್ಮ ಕಕ್ಷೆಯನ್ನು ಮೀರಿ ಜಿಗಿದು ಮತ್ತೊಂದೆಡೆ ಕಳುಹಿಸುವ ಪ್ರಕ್ರಿಯೆಗೆ ‘ಟ್ರಾನ್ಸ್ ಇಂಜಕ್ಷನ್’ ಎನ್ನಲಾಗುತ್ತಿದೆ. ಇದಕ್ಕೆ ಭಾರಿ ಪ್ರಮಾಣದ ಇಂಧನವನ್ನು ಒಮ್ಮೆಲೇ ಉರಿಸಬೇಕಾಗುತ್ತದೆ ರಾಕೆಟ್ ಬಳಸಿ ಬಾಹ್ಯಾಕಾಶ ನೌಕೆಯ ವೇಗವನ್ನು ಏಕಾಏಕಿ ನಿರ್ದಿಷ್ಟ ಬಿಂದುವಿನಲ್ಲಿ ಹೆಚ್ಚಿಸಲಾಗುತ್ತದೆ. ಹಾಗೆ ವೇಗ ಹೆಚ್ಚಿಸಿದಾಗ ನೌಕೆಯು ಕಡಿಮೆ ವೃತ್ತಾಕಾರದ ಭೂ ಕಕ್ಷೆಯಿಂದ ಹೆಚ್ಚು ಹತ್ತಿರದ ಕಕ್ಷೆಗೆ ಬದಲಾವಣೆಗೊಳ್ಳುತ್ತದೆ. ಇಡೀ ಚಂದ್ರಯಾನದಲ್ಲಿ ಇದು ಪ್ರಮುಖ ಘಟ್ಟವಾಗಿದೆ.






