ಗಂಡ ಹೆಂಡತಿ ಜಗಳ: ಕಾಫಿಯಲ್ಲಿ ವಿಷ ಬೆರೆಸಿ ಕೊಟ್ಟ ಪತ್ನಿ, ಜೀವನ್ಮರಣ ಹೋರಾಟದಲ್ಲಿ ಗಂಡ

Views: 195
ಕನ್ನಡ ಕರಾವಳಿ ಸುದ್ದಿ: ಮಹಿಳೆ ತನ್ನ ಪತಿ ಅನುಜ್‌ಗೆ ಕಾಫಿಯಲ್ಲೇ ವಿಷ ಹಾಕಿ ನೀಡಿದ್ದು ಈಗ ಎಲ್ಲೆಡೆ ಸುದ್ದಿಯಾಗಿದೆ.
ಮೂಲತಃ ಫಾರೂಕಾಬಾದ್‌ನ ನಿವಾಸಿಯಾಗಿದ್ದ ಶಾನೋ ಅವರನ್ನು ಅನುಜ್ ಅವರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆಯ ನಂತರ ಶಾನೋ ಅನುಜ್ ಕುಟುಂಬದೊಂದಿಗೆ ಹೊಂದಿಕೊಂಡು ಹೋಗುವ ಪ್ರಯತ್ನವನ್ನೇ ಮಾಡಿಲ್ಲ. ಬದಲಾಗಿ, ಅನುಕ್ ಮಾತ್ರವಲ್ಲದೇ ಆತನ ಕುಟುಂಬಸ್ಥರಿಗೂ ಎಷ್ಟು ಸಾಧ್ಯವೋ ಅಷ್ಟು ತೊಂದರೆ ನೀಡುತ್ತಿದ್ದರು ಎಂದು ಅನುಜ್ ಸಹೋದರಿ ಮೀನಾಕ್ಷಿ ಹೇಳಿದ್ದಾರೆ.
ಇನ್ನು ದಂಪತಿ ನಡುವೆಯೂ ಪದೇ ಪದೇ ಜಗಳ ನಡೆಯುತ್ತಿದ್ದದ್ದು ಅವರ ವೈವಾಹಿಕ ಜೀವನ ಸುಖಕರವಾಗಿಲ್ಲ ಎಂಬುದನ್ನು ಎತ್ತಿ ತೋರಿಸಿತ್ತು. ಈ ಜಗಳಗಳು ತಾರಕಕ್ಕೇರಿ, ಕೊನೆಗೆ ಅನುಜ್ ಜೀವವನ್ನೇ ತೆಗೆಯಲು ನಿರ್ಧರಿಸಿದ ಶಾನೊ, ಮಾರ್ಚ್ 25ರಂದು ಕಾಫಿಯಲ್ಲಿ ವಿಷ ಹಾಕಿ ಅನುಜ್‌ಗೆ ಕುಡಿಯಲು ಕೊಟ್ಟಿದ್ದಾಳೆ.
ವಿಷ ಬೆರೆಸಿದ ಕಾಫಿ ಕುಡಿದ ತಕ್ಷಣ ಅನುಜ್ ಆರೋಗ್ಯ ತೀವ್ರವಾಗಿ ಹದೆಗೆಟ್ಟಿದ್ದು, ಅವರನ್ನು ಮೀರತ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ವೈದ್ಯರು, ಅನುಜ್ ಹೊಟ್ಟೆಗೆ ವಿಷ ಸೇರಿರುವುದನ್ನು ದೃಢಪಡಿಸಿದರು. ಆಸ್ಪತ್ರೆಗೆ ದಾಖಲಾಗಿ ಇಂದಿಗೆ ಮೂರು ದಿನಗಳಾಗಿದ್ದರೂ, ಅನುಜ್ ಸ್ಥಿತಿ ಗಂಭೀರವಾಗಿಯೇ ಇದೆ. ಅವರ ಚಿಕಿತ್ಸೆ ಮುಂದುವರಿಯುತ್ತಲಿದೆ.
ಅನುಜ್ ಸಹೋದರಿ ಮೀನಾಕ್ಷಿ, ತನ್ನ ಅಣ್ಣನ ಜೀವನದಲ್ಲಿ ನಡೆದ ಅನ್ಯಾಯವನ್ನು ಪ್ರಶ್ನಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಅತ್ತಿಗೆಯನ್ನು ಬಂಧಿಸಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ವಿನಂತಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದು, ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಇನ್ನು, ತನಿಖೆ ನಡೆಸಿದ ನಂತರವೇ ಅನುಜ್ ಪತ್ನಿ ಶಾನೋ ಅವರು ಹೀಗೆ ಮಾಡಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀರತ್ ಘಟನೆ ನಡೆದ ಕೆಲವೇ ದಿನಗಳ ಬಳಿಕ ಶಾನೋ ಪ್ರಕರವಣವೂ ಬೆಳಕಿಗೆ ಬಂದಿದ್ದು, ಸಂಪೂರ್ಣ ಉತ್ತರ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ಶಾನೋ ಯತ್ನ ಸಂಪೂರ್ಣವಾಗಿ ಸಫಲವಾಗಿಲ್ಲವಾದರೂ, ಅನುಜ್ ಇನ್ನೂ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.