ಕೊಲ್ಲೂರು ದೇಗುಲದ ನಕಲಿ ವೆಬ್‌ಸೈಟ್ ಮೂಲಕ ಕೊಠಡಿ ಕಾಯ್ದಿರಿಸುವ ಹೆಸರಿನಲ್ಲಿ ವಂಚನೆ!
Views: 91
ಕನ್ನಡ ಕರಾವಳಿ ಸುದ್ದಿ:ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ರಚಿಸಿ ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ಹೆಸರಿನಲ್ಲಿ ವಂಚಿಸುತ್ತಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತರು karnatakatempleaccommodation ಈ ನಕಲಿ ವೆಬ್‌ಸೈಟ್‌ನ್ನು ರಚಿಸಿದ್ದು, ಈ ನಕಲಿ ವೆಬ್‌ಸೈಟ್ ಮೂಲಕ ಹಲವಾರು ಜನರಿಗೆ ಲಲಿತಾಂಬಿಕಾ ಅತಿಥಿ ಗೃಹದ ಕೊಠಡಿಯನ್ನು ಕಾಯ್ದಿರಿಸಿದ್ದಾರೆ. ಅವರಿಂದ ವಾಟ್ಸಾಪ್ ತಂತ್ರಾಂಶದಲ್ಲಿ ಪೋನ್ ಪೇಯ ಕ್ಯೂಆರ್ ಕೋಡ್‌ನ್ನು ನೀಡಿ ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚಿಸಿ ಹಣ ದೋಚುತ್ತಿರುವುದು ಕಂಡುಬಂದಿದೆ.
ದೇವಳದ ಭಕ್ತರಿಗೆ ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ಬಗ್ಗೆ ವಂಚಿಸುತ್ತಿರುವ ಈ ನಕಲಿ ವೆಬ್‌ಸೈಟ್ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಠಡಿ ಕಾಯ್ದಿರಿಸುವ ಬಗ್ಗೆ ಮೋಸ ಹೋಗದಂತೆ ದೇಗುಲದ ಪ್ರಕಟಣೆ
ದೇಗುಲಕ್ಕೆ ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಿಂದ ಅಪಾರ ಭಕ್ತರು ಆಗಮಿಸುತ್ತಿರುವುದರಿಂದ ಅವರಿಗೆ ತಂಗಲು ದೇಗುಲದ ವ್ಯಾಪ್ತಿಯ ಲಲಿತಾಂಬಿಕಾ, ಜಗದಾಂಬಿಕಾ, ನಾದಾಂಬಿಕಾ ಅತಿಥಿಗೃಹದ ಕೊಠಡಿ ಹಾಗೂ ಹಾಲ್ ಗಳನ್ನು ಅಧೀಕೃತ ವೆಬ್ ಸೈಟ್ ನಲ್ಲಿ ಕಾಯ್ದಿರಿಸಲು ಅವಕಾಶ ವಿರುತ್ತದೆ.
ಆದರೆ ಕರ್ನಾಟಕ ಟೆಂಪಲ್ ಎಕೋಮಡೇಷನ್ ಎನ್ನುವ ನಕಲಿ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿದ್ದು, ಈ ವೆಬ್ ಸೈಟ್ ಮೂಲಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯಾಪ್ತಿಯ ಕೊಠಡಿಗಳನ್ನು ಕಾಯ್ದಿರಿಸುವ ಸಂದರ್ಭದಲ್ಲಿ ವ್ಯಾಟ್ಸಪ್ ತಂತ್ರಾಂಶ ತೆರೆದುಕೊಳ್ಳುತ್ತದೆ. ಈ ತಂತ್ರಾಂಶದಲ್ಲಿ 9887138254 ನಂಬರ್ ಮೂಲಕ ಚಾಟಿಂಗ್ ಪ್ರಾರಂಭಿಸಿ ಶ್ರೀ ದೇವಳದ ಕೊಠಡಿಗಳ ಕಾಯ್ದಿರಿಸುವ ಬಗ್ಗೆ ವಿಚಾರಿಸಿದಾಗ ಕೊಠಡಿಗೆ ಆಗಮಿಸುವ, ನಿರ್ಗಮಿಸುವ ಭಕ್ತರ ಸಂಖ್ಯೆ ಹಾಗೂ ಯಾವ ವಿಧದ ರೂಮುಗಳು ಬೇಕೆಂದು ಉತ್ತರಿಸುತ್ತಾರೆ.
ಮುಂದುವರಿದು ಈ ಸಂದೇಶಕ್ಕೆ ಉತ್ತರಿಸಿದಾಗ ಗುರುತಿನ ಚೀಟಿಯನ್ನು ಒದಗಿಸಲು ತಿಳಿಸಿದ್ದು, ಅದರಂತೆ ಗುರುತಿನ ಚೀಟಿಯನ್ನು ನೀಡಿದಾಗ ಕೊಠಡಿಯನ್ನು ಕಾಯ್ದಿರಿಸಿರುವ ಬಗ್ಗೆ ದೃಢೀಕರಣ ಬಂದ ಮೇಲೆ ಹಣ ಪಾವತಿಸುವ ಬಗ್ಗೆ ಫೋನ್ ಪೇನ ಕ್ಯೂ ಆರ್‌ಕೋಡ್ ನೀಡಿ ಹಣ ಪಾವತಿಸಿ ಎಂದು ಸಂದೇಶ ಕಳಿಸುತ್ತಾರೆ. ಈ ರೀತಿಯಾಗಿ ನಕಲಿ ವೆಬ್ ಸೈಟ್ ನಲ್ಲಿ ದೇವಳದ ಕೊಠಡಿಗಳನ್ನು ಕಾಯ್ದಿರಿಸಿ ಭಕ್ತರಿಗೆ ಮೋಸ ಮಾಡುತ್ತಿರುವುದು ದೇಗುಲದ ಗಮನಕ್ಕೆ ಬಂದಿದೆ. ಭಕ್ತರು ಮೋಸ ಹೋಗದೆ ಕೊಠಡಿಗಳಿಗಾಗಿ ದೇಗುಲವನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.






