ಕುಂದಾಪುರ :ಹಾಲಾಡಿಯಲ್ಲಿ ಬಾಲ್ಯ ವಿವಾಹ, ಪೋಷಕರ ವಿರುದ್ಧ ಪ್ರಕರಣ ದಾಖಲು

Views: 369
ಕುಂದಾಪುರ:ಹಿಂದೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಾತ್ರ ಬಾಲ್ಯ ವಿವಾಹ ನಡೆಯುತ್ತಿತ್ತು ಆದರೆ ಇತ್ತೀಚಿಗೆ ದಕ್ಷಿಣ ಭಾರತದಲ್ಲಿ ವಿವಾಹ ಪ್ರಕರಣಗಳು ಹೆಚ್ಚಾಗಿದ್ದು ಇದೀಗ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಅಪ್ತಾಪ್ತ ವಯಸ್ಸಿನ ಯುವತಿಗೆ ತೊಂಬಟ್ಟು ಗ್ರಾಮದ ಯುವಕನೊಂದಿಗೆ ನಡೆದ ಬಾಲ್ಯ ವಿವಾಹದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಲಾಡಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ 21ರಂದು ನಡೆದ ಬಾಲ್ಯ ವಿವಾಹದ ಬಗ್ಗೆ ಕುಂದಾಪುರ ಸಹಾಯಕ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಗೆ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ಪ್ರಕರಣದಲ್ಲಿ ತೊಂಬಟ್ಟು ನಿವಾಸಿ ಭರತ್ ಶೆಟ್ಟಿ, ಯುವತಿಯ ತಂದೆ ಸಂತೋಷ್ ಶೆಟ್ಟಿ ಹಾಗೂ ಆಕೆಯ ಬಾವ ರಾಜೇಶ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಹಾಲಾಡಿಯ ಅಪ್ರಾಪ್ತ ವಯಸ್ಸಿನ ಯುವತಿ ಹಾಗೂ ತೊಂಬಟ್ಟಿನ ಭರತ್ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಮದುವೆಯಾಗುವಂತೆ ಬಾಲಕಿಯನ್ನು ಒತ್ತಾಯಿಸುತ್ತಿದ್ದ. ಬಾಲಕಿ ಕೂಡ ಆತನೊಂದಿಗೆ ಮದುವೆ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದ್ದಾಗಿ ಹೇಳಿದ್ದಾಳೆ.ಬಾಲಕಿಯ ತಂದೆಯು ಮಗಳ ಬೆದರಿಕೆಗೆ ಹೆದರಿ ಮದುವೆ ಮಾಡಿಸಿಕೊಟ್ಟಿದ್ದರು.
ಬಾಲ್ಯ ವಿವಾಹ ಕಾನೂನು ಬಾಹಿರವಾಗಿದ್ದು, ಇದರಿಂದ ಮಕ್ಕಳ ಬಾಲ್ಯವನ್ನು ಕಸಿಯುವ ಮೂಲಕ, ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಮಾನವ ಹಕ್ಕು ಉಲ್ಲಂಘನೆ ಆಗಲಿದೆ. ಮಕ್ಕಳ ಭವಿಷ್ಯ ಕುಂಠಿತಗೊಳ್ಳಲಿದೆ. ಅನೇಕ ಸಾಮಾಜಿಕ, ಆರ್ಥಿಕ ಮತ್ತು ಮೂಡನಂಬಿಕೆಗಳಿಂದ ಬಾಲ್ಯ ವಿವಾಹಗಳು ನಡೆಯುತ್ತಿದ್ದು, ಈ ಸಮಸ್ಯೆಯನ್ನು ಬೇರು ಮಟ್ಟದಲ್ಲೇ ನಿರ್ಮೂಲನೆಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು, ಸ್ವಯಂಸೇವಾ ಸಂಸ್ಥೆಗಳು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಮತ್ತು ಬಾಲ್ಯ ವಿವಾಹ ತಡೆಗಟ್ಟವಿಕೆ ಪ್ರತಿ ಯೊಬ್ಬರ ಜವಾಬ್ದಾರಿಯಾಗಿದೆ.






