ಧಾರ್ಮಿಕ

ಕುಂದಾಪುರ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ನೂತನ ಬೆಳ್ಳಿರಥ ಸಮರ್ಪಣಾ ಕಾರ್ಯಕ್ರಮ ಕೋಟೇಶ್ವರದಿಂದ ಪ್ರಯಾಣ 

Views: 76

ಕನ್ನಡ ಕರಾವಳಿ ಸುದ್ದಿ:  ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿರುವ ಶಿಲ್ಪಕಲಾ ಕೇಂದ್ರದಲ್ಲಿ ಈ ಅದ್ಭುತ ರಥವನ್ನು ರಚಿಸಲಾಗಿದ್ದು, ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಯು ಈ ರಥವನ್ನು ಕುಕ್ಕೆ ಕ್ಷೇತ್ರಕ್ಕೆ ಕಾಣಿಕೆಯಾಗಿ ನೀಡಿದೆ.

ಕೋಟೇಶ್ವರದ ರಥಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ, ರಾಜಗೋಪಾಲ ಆಚಾರ್ಯ, ಅವರು ನಿರ್ಮಿಸಿದ ಸುಮಾರು 2 ಕೋಟಿ ರೂ. ವೆಚ್ಚದ ನೂತನ ರಥವನ್ನು ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಾಕಲಾ ಕೇಂದ್ರದಿಂದ ಅಲಂಕೃತ ವಾಹನದಲ್ಲಿ ಕೋಟೇಶ್ವರ ದೇಗುಲಕ್ಕೆ ತರಲಾಯಿತು.

ದೇಗುಲದ ತಂತ್ರಿ ಹಾಗೂ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಐತಾಳ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ದೇಗುಲದಲ್ಲಿ ನಡೆದ ವಿಶೇಷ ಪೂಜೆಯ ಅನಂತರ ಸಾಂಪ್ರದಾಯಿಕ, ಧಾರ್ಮಿಕ ಪದ್ಧತಿಗಳ ಅನಂತರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ನೂತನ ರಥ ಸಮರ್ಪಣಾ ಕಾರ್ಯಕ್ರಮದ ಪ್ರಯಾಣಕ್ಕೆ ಚಾಲನೆ ನೀಡಿದರು.

ರಥದ ವಿಶೇಷತೆಗಳು:

ತೂಕ: 110 ಕೆ.ಜಿ ಶುದ್ಧ ಬೆಳ್ಳಿ,

ಎತ್ತರ: 14 ಅಡಿ.

ನಿರ್ಮಾತೃಗಳು: ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜ ಗೋಪಾಲಾಚಾರ್ಯರು.

ಮಂಗಳವಾರ ಕೋಟೇಶ್ವರದಿಂದ ಮೆರವಣಿಗೆಯ ಮೂಲಕ ರಥವನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆಗೆದುಕೊಂಡು ಹೋಗಲಾಯಿತು. ರಥವು ದಾರಿಯುದ್ದಕ್ಕೂ ಸಾಗುತ್ತಿದ್ದ ಪ್ರಮುಖ ಕ್ಷೇತ್ರಗಳು ಮತ್ತು ಜಂಕ್ಷನ್‌ಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ರಥವನ್ನು ಸ್ವಾಗತಿಸಿದರು.

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬೆಳ್ಳಿ ರಥವನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸೇರಿದಂತೆ ನೂರಾರು ಭಕ್ತರು ಸೇರಿ ಮಂಗಳೂರಿಗೆ ರಥವನ್ನು ಬೀಳ್ಕೊಟ್ಟರು. ಈ ಬೆಳ್ಳಿಯ ರಥ ಇನ್ನು ಮುಂದೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಧಾರ್ಮಿಕ ಕೈಂಕರ್ಯಗಳಲ್ಲಿ ಬಳಕೆಯಾಗಲಿದೆ.

Related Articles

Back to top button