ಕಾಳಾವರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಆದಿದ್ರಾವಿಡ ಸೇವಾ ಸಮಿತಿ ಉದ್ಘಾಟನೆ
Views: 130
ಕನ್ನಡ ಕರಾವಳಿ ಸುದ್ದಿ:”ಸಂಘಟನೆಯಿಂದ ಸಮಸ್ಯೆಗಳ ಪರಿಹಾರ ಸುಲಭ, ದುಶ್ಟಟಗಳಿಂದ ದೂರವಿರಿ, ಕಾನೂನಿನ ದುರ್ಬಳಕೆ ಮಾಡಬೇಡಿ, ಶಿಕ್ಷಣಕ್ಕೆ ಒತ್ತುಕೊಡಿ” ಹೀಗೆಂದು ಡಾ. ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ ಸೇವಾ ಸಮಿತಿ ಕಾಳಾವರ ಇದನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಕುಂದಾಪುರ ಪೋಲಿಸ್ ಉಪ ವಿಭಾಗದ ಪೋಲಿಸ್ ಅಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹೇಳಿದರು.
ಸಂವಿಧಾನದ ಪೀಠಿಕೆಯ ಪ್ರಸ್ತಾವನೆಯನ್ನು ಹೇಳುವುದರ ಮೂಲಕ ಆರಂಭಗೊಂಡ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರಿನ ಆದಿದ್ರಾವಿಡ ಸಮಾಜದ ಸೇವಾ ಸಮಿತಿಯು ದಿನಾಂಕ:01-12-2024ರಂದು ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಗರಗದ್ದೆಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ದೇವಸ್ಥಾನದ ವಠಾರದಲ್ಲಿ ಉದ್ಘಾಟನೆಗೊಂಡಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಎಂ. ಪಿ. ಸಂಜೀವ ಮಾಸ್ಟರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಲಿತ ಸಾಹಿತಿ ಹರಿದಾಸ್ ಕೆ.ಕೆ.ಕಾಳಾವರ್ ರವರು ‘ ಸರ್ಕಾರವು ದಲಿತ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಬೇಕು ಎಂದರು. ಸಮಿತಿಯ ಉಪಾಧ್ಯಕ್ಷ ರಘುವೀರ ಕೆ. ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಸುಬ್ಬಣ್ಣ ಕೋಣಿ ಅಂಬೇಡ್ಕರ್ ಕುರಿತು ಮಾತನಾಡಿ ಆಶಯ ಗೀತೆ ಹಾಡಿದರು.
ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿಗಾರ್ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸುಪ್ರಿಯಾ ನವೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯದರ್ಶಿ ಬಿ. ಮೋಹನಚಂದ್ರ ಕಾಳಾವರ್ ಕಾರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ವಿಜೇಂದ್ರ ಎಂ. ವಂದಿಸಿದರು.