ರಾಜಕೀಯ

ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಇಂಡಿಯಾ ಕೂಟದ ಸುದರ್ಶನ್ ರೆಡ್ಡಿ ಘೋಷಣೆ

Views: 116

ಕನ್ನಡ ಕರಾವಳಿ ಸುದ್ದಿ: ವಿರೋಧ ಪಕ್ಷಗಳ ಪರವಾಗಿ ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದೆ. ಇಂಡಿಯಾ ಕೂಟವು ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿವೆ.

ತೆಲಂಗಾಣ ಮೂಲದ ಸುದರ್ಶನ್ ರೆಡ್ಡಿ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 2007- 11ರ ನಡುವೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದರು. ಗೋವಾದ ಮೊದಲ ಲೋಕಾಯುಕ್ತರಾಗಿಯೂ ಸೇವೆ ಸಲ್ಲಿಸಿದ್ದ ಸುದರ್ಶನ್ ರೆಡ್ಡಿ ಅವರು 2005 ರಲ್ಲಿ ಗುವಾಹಟಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದರು.

ಅವರ ಹುಟ್ಟೂರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಕುಲಮೈಲಾರಂ. ಅವರು 1971 ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಕೂಟ ಈಗಾಗಲೇ ತಮಿಳುನಾಡಿನ ಸಿ.ಪಿ. ರಾಧಾಕೃಷ್ಣನ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಘೋಷಿಸಿದೆ.

ಸುದರ್ಶನ್ ರೆಡ್ಡಿ ಅವರನ್ನು ವಿಪಕ್ಷಗಳ ಪರ ಉಪ ರಾಷ್ಟ್ರಪತಿ ಅಭ್ಯರ್ಥಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಘೋಷಿಸಿದರು. I.N.D.I.A ಕೂಟದ ಎಲ್ಲ ವಿಪಕ್ಷಗಳು ಜಂಟಿಯಾಗಿ ಮಾಜಿ ಜಡ್ಜ್ ಸುದರ್ಶನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿವೆ. ಇದು ಪ್ರಜಾಪ್ರಭುತ್ವದ ದೊಡ್ಡ ಸಾಧನೆ” ಎಂದು ಖರ್ಗೆ ಬಣ್ಣಿಸಿದ್ದಾರೆ.

ಯಾರು ಈ ಸುದರ್ಶನ್ ರೆಡ್ಡಿ ಜುಲೈ 1946 ರಲ್ಲಿ ಜನಿಸಿದ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ, ಡಿಸೆಂಬರ್ 27, 1971 ರಂದು ಆಂಧ್ರಪ್ರದೇಶದ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ಸೇರಿಕೊಂಡ ನಂತರ ತಮ್ಮ ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 1988 ಮತ್ತು 1990 ರ ನಡುವೆ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿ ಮತ್ತು 1990 ರಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿ ಸೇವೆ ಸಲ್ಲಿಸಿದರು. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ ಮತ್ತು ಸ್ಥಾಯಿ ವಕೀಲರಾಗಿಯೂ ಸೇವೆ ಸಲ್ಲಿಸಿದ ಅನುಭವ ಪಡೆದುಕೊಂಡಿದ್ದಾರೆ.

ರೆಡ್ಡಿ ಅವರನ್ನು ಮೇ 2, 1995 ರಂದು ಆಂಧ್ರಪ್ರದೇಶ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು ಮತ್ತು ಡಿಸೆಂಬರ್ 5 2005 ರಂದು ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಅವರು ಜನವರಿ 12, 2007 ರಂದು ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದರು ಮತ್ತು ಜುಲೈ 8, 2011 ರಂದು ನಿವೃತ್ತರಾಗುವವರೆಗೆ ಸೇವೆ ಸಲ್ಲಿಸಿದ್ದರು.

ಮಾರ್ಚ್ 2013 ರಲ್ಲಿ, ಅವರು ಗೋವಾದ ಮೊದಲ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಏಳು ತಿಂಗಳೊಳಗೆ ಹುದ್ದೆಯಿಂದ ಕೆಳಗಿಳಿದಿದ್ದರು.

ಈ ಎಲ್ಲ ಹಿನ್ನೆಲೆ ಹೊಂದಿರುವ ಸುದರ್ಶನ ರೆಡ್ಡಿ ಅವರನ್ನು ಇಂಡಿಯಾ ಒಕ್ಕೂಟ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.

ಸಿ.ಪಿ. ರಾಧಾಕೃಷ್ಣನ್ ಆಯ್ಕೆ: ಆಂಧ್ರ ಸಿಎಂ, ಡಿಸಿಎಂ ಸ್ವಾಗತ: ಪ್ರಧಾನಿ ಮೋದಿ, ಬಿಜೆಪಿ ಸಂಸದೀಯ ಮಂಡಳಿಗೆ ನಾಯಕರ ಕೃತಜ್ಞತೆ

ಸಂಸತ್ನ ಪ್ರಸ್ತುತ ಬಲಾಬಲ: ಆರು ಖಾಲಿ ಸ್ಥಾನಗಳನ್ನು (ಲೋಕಸಭೆಯಲ್ಲಿ ಒಂದು ಮತ್ತು ರಾಜ್ಯಸಭೆಯಲ್ಲಿ ಐದು) ಹೊರತುಪಡಿಸಿ, ಪ್ರಸ್ತುತ ಎಲೋಕ್ಟ್ರಾಲ್ ಕಾಲೇಜಿನಲ್ಲಿ 782 ಸಂಸದರಿದ್ದಾರೆ.

ಈ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಯು ಒಟ್ಟು ಮತಗಳಲ್ಲಿ ಅರ್ಧಕ್ಕಿಂತ ಹೆಚ್ಚು (392 ಮತಗಳು) ಮತಗಳನ್ನು ಪಡೆದುಕೊಳ್ಳಬೇಕು.

ಲೋಕಸಭೆಯಲ್ಲಿ ಪ್ರಸ್ತುತ 542 ಸಂಸದರು :

NDA ಪರವಾಗಿರುವ ಸಂಸದರು : 293

ವಿರೋಧ ಪಕ್ಷದ ಸದಸ್ಯರು : 249

ರಾಜ್ಯಸಭೆಯಲ್ಲಿ ಪ್ರಸ್ತುತ 240 ಸಂಸದರಿದ್ದು, ಅದರಲ್ಲಿ NDA ಸುಮಾರು 130 ಸದಸ್ಯರ ಬೆಂಬಲವನ್ನು ಹೊಂದಿದೆ.

Related Articles

Back to top button