ಉಡುಪಿ ಪುತ್ತಿಗೆ ವಿಶ್ವಗೀತಾ ಪರ್ಯಾಯೋತ್ಸವ: ಜನವರಿ 8 ರಂದು ಶ್ರೀಗಳ ಪುರಪ್ರವೇಶ

Views: 45
ಉಡುಪಿ: ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರ ಪುರಪ್ರವೇಶ ಮತ್ತು ಪೌರಸನ್ಮಾನ ಕಾರ್ಯಕ್ರಮ 2024ರ ಜನವರಿ 8ರಂದು ನಡೆಯಲಿದೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ 2024ರ ಜನವರಿ 18ರಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಶ್ರೀಕೃಷ್ಣಪೂಜೆಯ ಪರ್ಯಾಯ ವಹಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಯ ಭಾಗವಾಗಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರ ಪುರಪ್ರವೇಶ ಮತ್ತು ಪೌರಸನ್ಮಾನ ಕಾರ್ಯಕ್ರಮ 2024ರ ಜನವರಿ 8ರ ಸೋಮವಾರ ಸಂಜೆ 7 ಗಂಟೆಗೆ ಉಡುಪಿ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ನಡೆಯಲಿದೆ.

ಭಾವೀ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ 4ನೇ ಪರ್ಯಾಯವು ಪುತ್ತಿಗೆ ವಿಶ್ವ ಗೀತಾ ಪರ್ಯಾಯ ಮಹೋತ್ಸವ ಎಂದು ಹೆಸರಿಸಲ್ಪಟ್ಟು ದೇಶ ವಿದೇಶಗಳಿಂದ ಶ್ರೀ ಕೃಷ್ಣನ ಭಕ್ತರನ್ನು ಆಕರ್ಷಿಸುತ್ತಿದೆ.
ಪೂಜ್ಯ ಶ್ರೀಪಾದರ ಆಶಯದಂತೆ ಎಲ್ಲ ಸಮಾಜದವರನ್ನು ಒಟ್ಟು ಸೇರಿಸಿಕೊಂಡು ಈ ಪರ್ಯಾಯ ಮಹೋತ್ಸವವನ್ನು ಏರ್ಪಡಿಸುವ ನಿಟ್ಟಿನಲ್ಲಿ ಪದ್ಮಶಾಲಿ / ಶೆಟ್ಟಿಗಾರ ಸಮಾಜದ ದೇವಸ್ಥಾನಗಳ ಪ್ರತಿನಿಧಿಗಳನ್ನು, ಸಮಾಜದ ಪ್ರಮುಖರನ್ನು, ಸಂಘಟನೆಗಳ ಮುಖ್ಯಸ್ಥರನ್ನು ಆಹ್ವಾನಿಸಿ ಡಿಸೆಂಬರ್ 24, 2023 ರಂದು ಸಭೆಯನ್ನು ಮಾಡಲಾಯಿತು.

ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಶ್ರೀ ರಮೇಶ್ ಭಟ್, ಶೀ ಜಿ.ವಿ ಆಚಾರ್ಯ ಮತ್ತು ಹೊರೆ ಕಾಣಿಕೆ ಸಮಿತಿ ಸಂಚಾಲಕರಾದ ಶ್ರೀ ಸುಪ್ರಸಾದ್ ಶೆಟ್ಟಿ ಇವರು ಸಮಾಜ ಬಾಂಧವರಿಗೆ ಪರ್ಯಾಯ ಮಹೋತ್ಸವದ ರೂಪುರೇಷೆಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ಜನವರಿ 8 ರಂದು ಜರುಗಲಿರುವ ಪುರಪ್ರವೇಶ ಕಾರ್ಯಕ್ರಮದಲ್ಲಿ ನಮ್ಮ ಕುಲಕಸುಬಿನ ಉಡುಪಿ ಸೀರೆಗಳನ್ನು ಧರಿಸಿ ಸುಶೋಭಿತೆಯರಾಗಿ ಮಾತೆಯರು ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಮಹನೀಯರು ಜೊತೆಯಾಗಿ ಭಜನೆ ಮಾಡಿಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕುವುದು ಎಂದು ನಿರ್ಧರಿಸಲಾಯಿತು.
ಜನವರಿ 15 ರಂದು ಜರಗಲಿರುವ ವಿವಿಧ ಸಮಾಜದ ಹೊರೆ ಕಾಣಿಕೆ ಕಾರ್ಯಕ್ರಮದಲ್ಲಿ ನಮ್ಮ ಸಮಾಜವೂ ಸೇರಿಕೊಳ್ಳಬೇಕು ಮತ್ತು ಸಮಾಜದ 16 ದೇವಸ್ಥಾನಗಳಿಂದಲೂ ಹೊರೆ ಕಾಣಿಕೆ ಸಲ್ಲಿಸುವಂತಾಗಲಿ ಎಂದು ಸುಪ್ರಸಾದ್ ಶೆಟ್ಟಿ ಅವರು ಆಶಯ ವ್ಯಕ್ತಪಡಿಸಿದರು.
ಈ ಪರ್ಯಾಯ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಕೃಷ್ಣ ಭಕ್ತರು ಆಗಮಿಸುವ ಸಂದರ್ಭದಲ್ಲಿ ಸಹಸ್ರಾರು ಸ್ವಯಂಸೇವಕರ ಅಗತ್ಯವಿದ್ದು ನಮ್ಮ ಸಮಾಜದಿಂದ ಕನಿಷ್ಠ 108 ಸ್ವಯಂಸೇವಕರನ್ನು ನಿಯೋಜಿಸಬೇಕೆಂದು ವಿನಂತಿಸಲಾಯಿತು.

ಈ ಪರ್ಯಾಯ ಮಹೋತ್ಸವದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮಾಜ ಬಾಂಧವರನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಮಾಜಿ ಅಧ್ಯಕ್ಷರಾದ ಶ್ರೀ ಬಿ.ಎಚ್ ಶೆಟ್ಟಿಗಾರ್ ಇವರನ್ನು ಸರ್ವಾನುಮತದಿಂದ ಈ ಕಾರ್ಯಕ್ರಮದ ಸಂಚಾಲಕರಾಗಿ ನೇಮಿಸಲಾಯಿತು. ಮುಂದಿನ ಕಾರ್ಯ ಚಟುವಟಿಕೆಗಳನ್ನು ಅವರ ನೇತೃತ್ವದಲ್ಲಿ ಮಾಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಬಾರ್ಕೂರು ದೇವಸ್ಥಾನದ ಮೊಕ್ತೇಸರರಾದ ಡಾ. ಜಯರಾಮ್ ಶೆಟ್ಟಿಗಾರ್, ಕಲ್ಯಾಣಪುರ ದೇವಸ್ಥಾನದ ಮೊಕ್ತೇಸರರಾದ ಶ್ರೀ ಜ್ಯೋತಿಪ್ರಸಾದ್ ಶೆಟ್ಟಿಗಾರ್, ಕಿನ್ನಿಮುಲ್ಕಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ಪ್ರಭಾಶಂಕರ್ ಪದ್ಮಶಾಲಿ, ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಮಾಜಿ ಅಧ್ಯಕ್ಷರುಗಳಾದ ಶ್ರೀ ಸದಾನಂದ ಶೆಟ್ಟಿಗಾರ್, ಶ್ರೀ ಬಿ. ಎಚ್ ಶೆಟ್ಟಿಗಾರ್ ಮತ್ತು ಶ್ರೀ ಸಿ. ಪ್ರಭಾಕರ್, ದುಬೈ ಸಂಘದ ಸ್ಥಾಪಕ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ ಇವರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಮಾಜದ ಸರ್ವ ರೀತಿಯ ಸಹಕಾರದ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ 16 ದೇವಸ್ಥಾನ, ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ ಮತ್ತು ಇತರ ಸಂಘಟನೆಗಳ ಪ್ರತಿನಿಧಿಗಳಿಗೆ ಪರ್ಯಾಯ ಮಹೋತ್ಸವದ ವಿಶೇಷ ಆಮಂತ್ರಣಗಳನ್ನು ವಿತರಿಸಲಾಯಿತು.
ಇದರ ಮುಂದುವರಿದ ಭಾಗವಾಗಿ 30.12.2023ರಂದು ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಶ್ರೀ ಬಿ.ಎಚ್ ಶೆಟ್ಟಿಗಾರ್ ಇವರ ಅಧ್ಯಕ್ಷತೆಯಲ್ಲಿ ಸಮಾಜದ ಸಭೆ ಜರುಗಿತು. ಸಭೆಯಲ್ಲಿ ಬಾರ್ಕೂರು, ಕಲ್ಯಾಣಪುರ, ಸಾಲಿಕೇರಿ, ಕಿನ್ನಿಮೂಲ್ಕಿ, ಕಾಪು, ಎರ್ಮಾಳು ಮತ್ತು ಕಾರ್ಕಳ ದೇವಸ್ಥಾನಗಳ ಮೊಕ್ತೇಸರರು / ಪ್ರತಿನಿಧಿಗಳು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಈ ಸಭೆಯಲ್ಲಿ ಪುರ ಪ್ರವೇಶ, ಹೊರೆಕಾಣಿಕೆ ಮತ್ತು ಸ್ವಯಂಸೇವಕರ ಜೋಡಣೆ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುವ ನಿಟ್ಟಿನಲ್ಲಿ ಈ ಕೆಳಗಿನಂತೆ ಸಹಸಂಚಾಲಕರು ಮತ್ತು ಸಂಯೋಜಕರನ್ನು ನೇಮಿಸಲಾಯಿತು.
ಸಂಚಾಲಕರು: ಶ್ರೀ ಬಿ.ಎಚ್ ಶೆಟ್ಟಿಗಾರ,
ಸಹ ಸಂಚಾಲಕರು:ಶ್ರೀ ಭಾಸ್ಕರ್ ಶೆಟ್ಟಿಗಾರ್ ಚಿಟ್ಪಾಡಿ, ಶ್ರೀ ರವಿ ಶೆಟ್ಟಿಗಾರ್ ಕಾರ್ಕಳ, ಶ್ರೀಮತಿ ಶೋಭಾ ಜ್ಯೋತಿಪ್ರಸಾದ್ ಶೆಟ್ಟಿಗಾರ್,
ಪುರ ಪ್ರವೇಶದ ಸಂಯೋಜಕರು:ಶ್ರೀಮತಿ ಮಮತಾ ರೂಪೇಶ್, ಶ್ರೀ ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ, ಶ್ರೀಮತಿ ಸ್ವಾತಿ ಕರುಣಾಕರ್ ವಕ್ವಾಡಿ
ಹೊರೆಕಾಣಿಕೆ ಸಂಯೋಜಕರು:ಶ್ರೀ ಆನಂದ ಶೆಟ್ಟಿಗಾರ್ ಬೈಲೂರು, ಶ್ರೀ ಹರೀಶ್ ಶೆಟ್ಟಿಗಾರ್ ಕುತ್ಪಾಡಿ.
ಸ್ವಯಂಸೇವಕರ ಸಂಯೋಜಕರು:ಶ್ರೀ ವೆಂಕಟೇಶ ಶೆಟ್ಟಿಗಾರ್ ಮಣಿಪಾಲ,ಶ್ರೀ ಗಣೇಶ್ ಶೆಟ್ಟಿಗಾರ್ ಕಲ್ಯಾಣಪುರ,
ಈ ಮೇಲಿನ ಎಲ್ಲ ವಿಭಾಗಗಳಿಗೆ ಪ್ರತಿ ದೇವಸ್ಥಾನದ ಮೊಕ್ತೇಸರರುಗಳು, ಒಬ್ಬೊಬ್ಬ ಸಂಯೋಜಕರನ್ನು ನೇಮಿಸಿ, ಈ ಮೇಲಿನ ಸಂಚಾಲಕರುಗಳಿಗೆ ತಿಳಿಸುವುದು ಎಂದು ನಿರ್ಣಯ ಮಾಡಲಾಯಿತು ಮತ್ತು ಅವರು ಸಹ ಸಂಚಾಲಕರು ಮತ್ತು ಸಂಯೋಜಕರೊಂದಿಗೆ ಸಂವಹನ ಮಾಡಿ ಎಲ್ಲಾ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ರೂಪುಗೊಳ್ಳಲು ಸಹಕರಿಸುವಂತೆ ಪುತ್ತಿಗೆ ವಿಶ್ವ ಗೀತಾ ಪರ್ಯಾಯ ಮಹೋತ್ಸವ ಸ್ವಾಗತ ಸಮಿತಿಯ ಸದಸ್ಯರಾದ ರತ್ನಾಕರ ಇಂದ್ರಾಳಿ ವಿನಂತಿಸಿದ್ದಾರೆ.






