ಉಡುಪಿ ಕೃಷ್ಣ ಮಠವನ್ನು ಸ್ಫೋಟಿಸಲು ಸಂಚು;ತನಿಖೆ ವೇಳೆ ಬಹಿರಂಗ!

Views: 0
ಉಡುಪಿಯ ಶ್ರೀ ಕೃಷ್ಣ ಮಠ, ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಹಾಗೂ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿ ಸ್ಪೋಟಕ್ಕ ಉಗ್ರರು ಸಂಚು ರೂಪಿಸಿರುವುದು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ನಡೆಸಿದ ತನಿಖೆ ವೇಳೆ ತಿಳಿದು ಬಂದಿದೆ.
ಶಂಕಿತ ಉಗ್ರರು ಕರ್ನಾಟಕದ ಮೂರು ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ತನಿಖೆ ವೇಳೆ ಶಂಕಿತ ಉಗ್ರ ಅರಾಫತ್ ಅಲಿ ಹೇಳಿದ್ದಾನೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಶಿವಮೊಗ್ಗ ಮೂಲದ ಅರಾಫತ್ ಅಲಿಯನ್ನು ಸೆಪ್ಟೆಂಬರ್ ನಲ್ಲಿ ಎನ್ ಐಎ ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಆತ ಭಯಾನಕ ಅಂಶಗಳನ್ನು ಹೇಳಿದ್ದಾನೆ. ಕರ್ನಾಟಕದಲ್ಲಿ ಮೂರು ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದೇವು. ಮೊದಲಿಗೆ ಕದ್ರಿ ದೇವಸ್ಥಾನವನ್ನು ಟಾರ್ಗೇಟ್ ಮಾಡಲಾಗಿತ್ತು. ಇದು ಯಶಸ್ವಿಯಾಗಿದ್ದರೆ ಉಡುಪಿ ಮಠ, ಚಿಕ್ಕಮಗಳೂರಿನ ಬಿಜೆಪಿ ಕಚೇರಿಯನ್ನೂ ಟಾರ್ಗೆಟ್ ಮಾಡಲಾಗಿತ್ತು ಎಂದು ತಿಳಿಸಿದ್ದಾನೆ. ಕದ್ರಿ ದೇವಸ್ಥಾನ ತಲುಪುವ ಮೊದಲೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿ ಯೋಜನೆ ವೈಫಲ್ಯಗೊಂಡಿತ್ತು ಎಂದು ಆತ ಹೇಳಿದ್ದಾನೆ. ಹೀಗಾಗಿ ಎನ್‌ಐಎ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಶಿವಮೊಗ್ಗಕ್ಕೆ ಬಂದಿದ್ದು, ತೀರ್ಥಹಳ್ಳಿಯ ನಾಲ್ವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.






